ಭರ್ತಿಯಾದ ಹತ್ತಿಕುಣಿ ಜಲಾಶಯಕ್ಕೆ ಪೂಜೆ

Spread the love

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಭಾಗದ ರೈತರ ಜೀವನಾಡಿ ಹತ್ತಿಕುಣಿ ಜಲಾಶಯ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ಈ ವರ್ಷ ಮುಂಗಾರು ಮಳೆ ಮುಂಚಿತವಾಗಿಯೇ ಆಗಮಿಸಿ, ಉತ್ತಮ ಮಳೆ ಸುರಿದಿರುವುದರಿಂದ ಅವಧಿಗೆ ಮುನ್ನವೇ ದಟ್ಟ ಹಸಿರಿನ ಅರಣ್ಯದ ಮಧ್ಯೆ ಇರುವ ಹತ್ತಿಕುಷಿ ಜಲಾಶಯ ಭರ್ತಿಯಾಗಿದೆ.
ಹಾಗಾಗಿ ರೈತರು ಖುಷಿಯಾಗಿದ್ದಾರೆ.

ಇಂದು ಜಲಾಶಯದ ಸಿಬ್ಬಂಧಿ ಜಲಾಶಯಕ್ಕೆ ಪೂಜೆ ಸಲ್ಲಿಸಿ,ಎರಡು ಗೇಟ್‌ಗಳನ್ನು ತೆರೆದು ನೀರು ಬಿಟ್ಟಿದ್ದಾರೆ,

ಈ ಜಲಾಶಯ ೦.೩೫೨ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಹತ್ತಿಕುಣಿ, ಕಟಗಿ ಶಹಾಪೂರ, ಹೊನಗೇರಾ, ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ, ಮುಂಡರಗಿ, ದಸರಾಬಾದ್ ಗ್ರಾಮಗಳ ರೈತರ ಸುಮಾರು ೫೩೦೦ ಎಕರೆಗೆ ನೀರು ಒದಗಿಸಲಿದೆ.

ರೈತರು ಮುಂಗಾರು ಬೆಳೆಯಾಗಿ ಭತ್ತ, ಹಿಂಗಾರು ಬೆಳೆಗಳಾಗಿ ಶೇಂಗಾ, ಜೋಳ, ಭತ್ತ, ಸಜ್ಜೆ, ಹತ್ತಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ.

ಜಲಾಶಯ ಮೇಲ್ಭಾಗದಲ್ಲಿ ಮಳೆಯಾದರೇ, ಹೆಚ್ಚಿನ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುತ್ತದೆ, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗುತ್ತದೆ.

ಜನ-ಜಾನುವಾರುಗಳನ್ನು ಹಳ್ಳದ ಹತ್ತಿರ ಮೇಯಿಸುವದಾಗಲೀ, ಮೀನು ಹಿಡಿಯಲು, ಬಟ್ಟೆ ತೊಳೆಯಲು ಹೋಗಬಾರದು, ರೈತರ ಕೃಷಿ ಪಂಪಸೆಟ್‌ಗಳನ್ನು ಸ್ಥಳಾಂತರಿಸಬೇಕೆಂದು ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚೇತನ ಕಲಾಸ್ಕರ್ ಜನರಲ್ಲಿ ಮನವಿ ಮಾಡಿದ್ದಾರೆ,