ಮೈಸೂರು: ಜಿ.ಎಸ್.ಟಿ. ವ್ಯಾಪ್ತಿಗೆ ಒಳಪಡದಿರುವ ಸಣ್ಣ ವ್ಯಾಪಾರಿಗಳ ನೆಮ್ಮದಿ ಕೆಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಸದಸ್ಯರು ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸಣ್ಣ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂ. ಜಿ ಎಸ್ ಟಿ ಪಾವತಿಸುವಂತೆ ರಾಜ್ಯ ಸರ್ಕಾರ ನೋಟಿಸ್ ನೀಡಿರುವುದನ್ನು ಪ್ರತಿಭಟನಾ ನಿರತರು ಖಂಡಿಸಿದರು.
ಜಿಎಸ್‌ಟಿ ಹೆಸರಿನಲ್ಲಿ ಹೆಚ್ಚು ತೆರಿಗೆ ವಿಧಿಸುವ ಮೂಲಕ ಸಣ್ಣ ವ್ಯಾಪಾರಿಗಳನ್ನು ಸರ್ಕಾರ ಸಂಕಷ್ಟಕ್ಕೆ ತಳ್ಳುತ್ತಿದೆ. ಹಾಲು, ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಇಂದು ಬಂಡವಾಳ ಹಾಕಿದರೆ ನಾಳೆ 500-1000 ರೂ ಲಾಭ ಬರುತ್ತದೆ. ಮೊದಲು ಟ್ಯಾಕ್ಸ್ ಎಂಬುದು ಶ್ರೀಮಂತರ ಮೇಲಿತ್ತು. ಈಗ ದಿನಗೂಲಿ ವ್ಯಾಪಾರಿಗಳ ಮೇಲೂ ಜಿ ಎಸ್ ಟಿ ಹೊರೆ ಹೊರಿಸುತ್ತಿರುವುದರಿಂದ ಸಣ್ಣ ವ್ಯಾಪಾರಿಗಳು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಕಿಡಿಕಾರಿದರು.
ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರ ರಾಜ್ಯದಲ್ಲಿ ಗೊಂದಲದ ಗೂಡಾಗಿದೆ. ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಿರುವ ಸಣ್ಣ ವ್ಯಾಪಾರಿಗಳು ಜುಲೈ 23ರಿಂದ 25ರ ವರೆಗೆ ವ್ಯಾಪಾರ ವಹಿವಾಟು ಬಂದ್ ಗೆ ಕರೆ ನೀಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಈ ವೇಳೆ ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದರು.

ಇದರಿಂದ ಸಣ್ಣ ವ್ಯಾಪಾರಿಗಳು ಯುಪಿಐ ವಹಿವಾಟಿನ ಸ್ಕ್ಯಾನರ್ ತೆಗೆದು ಹರಿದು ಹಾಕಿ, ನಗದು ಪಾವತಿಗೆ ಆದ್ಯತೆ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಎಲ್ಲಾ ವಹಿವಾಟು ನಗದಿನಲ್ಲೇ ನಡೆಸಿದರೆ ನಾವು ಮತ್ತೆ 5 ವರ್ಷ ಹಿಂದೆ ಹೋಗುತ್ತೇವೆ. ಇದರಿಂದ ಕಪ್ಪು ಹಣ ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ಚಿಲ್ಲರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿಕ್ಕಪುಟ್ಟ ಪೆಟ್ಟಿಗೆ ಅಂಗಡಿಗಳು ತರಕಾರಿ, ಹೂ ಮಾರಾಟಗಾರರಲ್ಲೂ ಸಹ ಈಗ ಯುಪಿಐ ಸ್ಕ್ಯಾನರ್ ಇದೆ. ಹೀಗಿರುವಾಗ ಶೇಕಡ 1% ಜಿಎಸ್ಟಿ ಗೋಸ್ಕರ ರಾಜ್ಯ ಸರ್ಕಾರ ಸಣ್ಣ ವ್ಯಾಪಾರಿಗಳ ರಕ್ತ ಹೀರಲು ಹೋಗಬಾರದು. ರಾಜ್ಯ ಸರ್ಕಾರ ಈಗಾಗಲೇ ಬಿಟ್ಟಿ ಭಾಗ್ಯಗಳಿಗಾಗಿ ಎಲ್ಲಾ ವಸ್ತುಗಳ ಬೆಲೆ ಮತ್ತು ತೆರಿಗೆಗಳನ್ನು ಏರಿಸಿ, ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಈಗ ಸಣ್ಣ ವ್ಯಾಪಾರಿಗಳ ಮೇಲೂ ಕಣ್ಣಿಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯು, ಊಟಕ್ಕೂ ಪರದಾಡುವ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೀಡಿರುವುದು ಸರಿಯಲ್ಲ. ಕೂಡಲೇ ಈ ಆದೇಶವನ್ನು ಮುಖ್ಯಮಂತ್ರಿಗಳು ಹಿಂಪಡೆದು ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಮತ್ತೆ ಯುಪಿಐ ವಹಿವಾಟುಗಳು ಸರಾಗವಾಗಿ ನಡೆಯುವಂತೆ ಸಹಕರಿಸಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಪ್ರಭುಶಂಕರ, ಗೋಲ್ಡನ್ ಸುರೇಶ್, ಸಿಂದುವಳ್ಳಿ ಶಿವಕುಮಾರ್, ಸುಬ್ಬೇಗೌಡ, ಬಸವರಾಜು, ಹೊನ್ನೇಗೌಡ, ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಡಾ. ಶಾಂತರಾಜೇ ಅರಸ್, ಆನಂದ್ ಗೌಡ, ಭಾಗ್ಯಮ್ಮ ಹನುಮಂತಯ್ಯ, ತಾಯೂರು ಗಣೇಶ್, ಪ್ರದೀಪ್, ಪದ್ಮ, ರಾಧಾಕೃಷ್ಣ, ಎಳನೀರು ರಾಮಣ್ಣ, ರಘು ಅರಸ್, ದರ್ಶನ್ ಗೌಡ, ಚಂದ್ರಶೇಖರ್, ಕುಮಾರ್, ಸ್ವಾಮಿ ಗೌಡ, ಮೂರ್ತಿ ಲಿಂಗಯ್ಯ, ಗಣೇಶ್ ಪ್ರಸಾದ್, ರವೀಶ್, ವಿಷ್ಣು ಮುಂತಾದವರು ಪಾಲ್ಗೊಂಡಿದ್ದರು.