ಢಾಕಾ: ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್ ಅಪಘಾತಕ್ಕೀಡಾಗಿದ್ದು 20 ಮಂದಿ ಮೃತಪಟ್ಟಿದ್ದಾರೆ.
ಸೋಮವಾರ ರಾಜಧಾನಿ ಢಾಕಾದಲ್ಲಿ ಚೀನಾ ನಿರ್ಮಿತ F-7 BGI ವಿಮಾನ ಅಪಘಾತಕ್ಕೀಡಾಗಿದ್ದು 20 ಮಂದಿ ದುರ್ಮರಣ ಹೊಂದಿದ್ದಾರೆ.
ಸೋಮವಾರ ಮಧ್ಯಾಹ್ನ ಸುಮಾರು 1 ಗಂಟೆ 5 ನಿಮಿಷಕ್ಕೆ ವಿಮಾನ ಟೇಕ್ ಆಫ್ ಆಗಿದೆ,ಅದಾದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ.
ವಿಮಾನವು ಮೈಲ್‌ಸ್ಟೋನ್ ಕಾಲೇಜಿನ ಕ್ಯಾಂಟೀನ್‌ನ ಛಾವಣಿಯ ಮೇಲೆ ಬಿದ್ದಿದೆ. ವಿಮಾನವು ಇದ್ದಕ್ಕಿದ್ದಂತೆ ದೊಡ್ಡ ಶಬ್ದದೊಂದಿಗೆ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭಯಭೀತರಾಗಿ ಹೊರಗೆ ಓಡಿ ಬಂದಿದ್ದಾರೆ.
ಈ ಕಟ್ಟಡವನ್ನು ಪ್ಲೇಗ್ರೂಪ್ ತರಗತಿಗಳಿಗೆ ಬಳಸಲಾಗುತ್ತಿತ್ತು. ವಿಮಾನ ಪತನದಲ್ಲಿ 20 ಮಂದಿ ಸಾವನ್ನಪ್ಪಿದ್ದು 170 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಪರಿಸ್ಥಿತಿ ಗಂಭೀರವಾಗಿದೆ.
ಬಾಂಗ್ಲಾದೇಶ ರಾಜಧಾನಿಯಲ್ಲಿ ಅಪಘಾತಕ್ಕೀಡಾದ F-7 BGI ಚೀನಾದಲ್ಲಿ ತಯಾರಾದ ಬಹು-ಪಾತ್ರದ ಯುದ್ಧ ವಿಮಾನವಾಗಿದೆ. ಇದು ಬಾಂಗ್ಲಾದೇಶ ವಾಯುಪಡೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ F-7 (MiG-21 ನ ರೂಪಾಂತರ) ನ ಸುಧಾರಿತ ವಿಮಾನ ಇದಾಗಿದೆ.