ರಿಯಾದ್: ಕಳೆದ 20 ವರ್ಷಗಳಿಂದ ಕೋಮಾದಲ್ಲಿದ್ದ ಸ್ಲೀಪಿಂಗ್ ಪ್ರಿನ್ಸ್ ಖ್ಯಾತಿಯ ಸೌದಿ ಅರೇಬಿಯಾ ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ವಿಧಿವಶರಾಗಿದ್ದಾರೆ.
ಶನಿವಾರ ಅವರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಭಾನುವಾರ ರಿಯಾದ್‌ನಲ್ಲಿ ನೆರವೇರಿದೆ.
ರಾಜಕುಮಾರ ತಲಾಲ್ ಅವರಿಗೆ 36 ವರ್ಷ ವಯಸ್ಸಾಗಿತ್ತು.ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಕಿಡಿಸಿ ಅವರು ಚೇತರಿಸಿಕೊಳ್ಳುವರೆಂಬ ಆಶಾಭಾವನೆಯಿಂದ ಅವರ ಕುಟುಂಬವು ಕಾಯುತ್ತಿತ್ತು. ಆದರೆ, ಶನಿವಾರ ಕೊನೆಯುಸಿರೆಳೆದಿರುವುದಾಗಿ ರಾಜಮನೆತನದ ಅಧಿಕಾರಿಗಳು ದೃಢಪಡಿಸಿದ್ದಾರೆ.
ರಾಜಕುಮಾರ ಅಲ್-ವಲೀದ್ ಸೌದಿ ಅರೇಬಿಯಾದ ಸಂಸ್ಥಾಪಕ ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗ. ರಾಜಕುಮಾರ ತಲಾಲ್ ಬಿನ್ ಅಬ್ದುಲಾಜೀಜ್ ಅವರ ಸುಪುತ್ರ. ರಾಜಕುಮಾರ ಅಲ್-ವಲೀದ್ ಸೌದಿ ರಾಜಮನೆತನದ ಉತ್ತರಾಧಿಕಾರಿಯಾಗಬೇಕಿತ್ತು.
ಆದರೆ ವಿಧಿ ಬರಹ ಬೇರೆಯೆ ಇತ್ತು.ಕಳೆದ 20 ವರ್ಷಗಳಿಂದ ಪ್ರಿನ್ಸ್ ವಾಲಿದ್ ಹಾಸಿಗೆ ಮೇಲೆಯೇ ಜೀವನ್ಮರಣ ಹೋರಾಟ ನಡೆಸುತ್ತಿದ್ದರು.ಅವರು 20 ವರ್ಷಗಳಿಂದ ವೆಂಟಿಲೇಟರ್ ಸಹಾಯದಲ್ಲಿದ್ದರು. ಟ್ಯೂಬ್ ಮೂಲಕ ದ್ರವಾಹಾರ ನೀಡಲಾಗುತ್ತಿತ್ತು.
ಮಲಗೇ ಇದ್ದುದರಿಂದ ರಾಜಕುಮಾರ ತಲಾಲ್ ಅವರನ್ನು ‘ಸ್ಲೀಪಿಂಗ್ ಪ್ರಿನ್ಸ್’ ಎಂದೇ ಕರೆಯಲಾಗುತ್ತಿತ್ತು. 2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುವಾಗ ಅವರಿಗೆ ಅಪಘಾತವಾಗಿತ್ತು. ಅಂದಿನಿಂದ 20 ವರ್ಷಗಳ ಕಾಲ ಅವರು ಕೋಮಾದಲ್ಲಿದ್ದರು.