ಟೆಕ್ಸಾಸ್ ನಲ್ಲಿ ಗಣಪತಿ ಶ್ರೀಗಳ ಸಮ್ಮುಖದಲ್ಲಿ ನಡೆದ ಗೀತಾ ಮಹಾಯಜ್ಞ 10 ನೇ ವಾರ್ಷಿಕೋತ್ಸವ

Spread the love

ಟೆಕ್ಸಾಸ್,ಜುಲೈ.13: ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಗೀತಾ ಮಹಾಯಜ್ಞ ಕಾರ್ಯಕ್ರಮದ 10 ನೇ ವಾರ್ಷಿಕೋತ್ಸವವನ್ನು ಈ ಬಾರಿ ಟೆಕ್ಸಾಸ್ ನ ಸಿಯುಟಿಎಕ್ಸ್ ಈವೆಂಟ್ ಸೆಂಟರ್ ನಲ್ಲಿ
ಆಚರಿಸಲಾಯಿತು.

ಮೈಸೂರಿನ ಅವಧೂತ ದತ್ತ ಪೀಠದ
ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಿಯುಟಿಎಕ್ಸ್ ಈವೆಂಟ್ ಸೆಂಟರ್ ನಲ್ಲಿ ನಡೆದ ಗೀತಾ ಉತ್ಸವ‌ ಎಲ್ಲರ ಮನ ಸೂರೆಗೊಂಡಿತು.

ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಕಾರ್ಯ ಸಿದ್ಧಿ ಹನುಮಾನ್ ದೇವಾಲಯವು ಸಿಯುಟೆಕ್ಸ್ ಕಾರ್ಯಕ್ರಮದಲ್ಲಿ ಯುಎಸ್ ನ ಅತಿದೊಡ್ಡ ಗೀತಾ ಆಚರಣೆಗಳಾದ ಗುರು ಪೂರ್ಣಿಮಾ ಮತ್ತು ಗೀತಾ ಉತ್ಸವವನ್ನು ಆಯೋಜಿಸಿದವು.

ಗೀತಾ ಉತ್ಸವದ ವೇಳೆ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಅವರು ಭಗವದ್ಗೀತೆಯ ಕಾರ್ಯಕ್ರಮಕ್ಕಾಗಿ ತಮ್ಮ ಶುಭಾಶಯಗಳು ಮತ್ತು ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದರು.

ಪೂಜ್ಯ ಶ್ರೀ ಸ್ವಾಮೀಜಿಯವರ 2015 ರ ದೈವಿಕ ಪ್ರತಿಜ್ಞೆ ಯಿಂದ ಎಸ್ ಜಿ ಎಸ್ ಗೀತಾ ಫೌಂಡೇಶನ್ ನಡೆಸುತ್ತಿರುವ ಗೀತಾ ಮಹಾಯಜ್ಞ ಕಾರ್ಯಕ್ರಮದ ಭಾಗವಾಗಿ ಕೇವಲ 10 ತಿಂಗಳಲ್ಲಿ ವಿದ್ಯಾರ್ಥಿಗಳು ಭಗವದ್ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿರುವುದು ವಿಶೇಷ.

ಗೀತಾ ಮಹಾಯಜ್ಞ ಕಾರ್ಯಕ್ರಮವು ಜಾಗತಿಕವಾಗಿ 7,000 ಕಂಠಪಾಠ ಮಾಡುವವರನ್ನು ಮತ್ತು 10,000 ನಿರರ್ಗಳ ಓದುಗರನ್ನು ಹೊಂದಿದೆ.

3,000 ಕಂಠಪಾಠ ಮಾಡುವವರು 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಇರುವುದು ವಿಶೇಷ.
2,000 ಕಂಠಪಾಠ ಮಾಡುವವರು ವಯಸ್ಕರಾಗಿದ್ದಾರೆ.

ಈ ಜಾಗತಿಕ ಆಂದೋಲನವನ್ನು ಸಕ್ರಿಯಗೊಳಿಸಲು ಎಸ್ ಜಿ ಎಸ್ ಗೀತಾ ಫೌಂಡೇಶನ್ 500 ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ.

ಈ ಸಂದರ್ಭದಲ್ಲಿ ಮೈಸೂರಿನ ಅವಧೂತ ದತ್ತಪೀಠದ ಪೂಜ್ಯ ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಟೆಕ್ಸಾಸ್ ಜನತೆಗೆ ಆಶೀರ್ವಚನ ನೀಡಿ ಮಾತನಾಡಿದರು.

ಇಂದು ವಿದ್ಯಾರ್ಥಿಗಳು, ಪ್ರೇಕ್ಷಕರು ಮತ್ತು ದೊಡ್ಡ ಸನಾತನ ಧರ್ಮ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲು. ನಾವು ಮೊದಲ ಸಂಪೂರ್ಣ ಭಗವದ್ಗೀತೆ ಪಾರಾಯಣವನ್ನು ವೀಕ್ಷಿಸಿದ ನಂತರ ಇದು ಹತ್ತನೇ ವರ್ಷ. ಈ ದಶಕದಲ್ಲಿ, ಇದು ಜಾಗತಿಕ ಚಳವಳಿಯಾಗಿದೆ ಎಂದು ಬಣ್ಣಿಸಿದರು.

ಚಿಕ್ಕ ಮಕ್ಕಳು, ಯುವಕರು, ದುಡಿಯುವ ಜನರು, ನಿವೃತ್ತ ಜನರು,ಎಲ್ಲಾ ವಯಸ್ಸಿನ ಜನರು ಸನಾತನ ಧರ್ಮದ ಶ್ರೇಷ್ಠ ನಿಧಿಯಾದ ಭಗವದ್ಗೀತೆಯನ್ನು ಕಲಿಯಲು ಶ್ರಮಿಸಿದ್ದಾರೆ ಎಂಬುದು ನಿಜವಾಗಿಯೂ ವಿಶೇಷವಾಗಿದೆ.ಪಾರಾಯಣದ ಸಮಯದಲ್ಲಿ, ನಾನು ಶ್ರೀ ಕೃಷ್ಣನು ಪ್ರತಿಯೊಬ್ಬರ ಮುಖದಲ್ಲೂ ಪ್ರಜ್ವಲಿಸುತ್ತಿರುವುದನ್ನು ಕಂಡೆ ಎಂದು ಶ್ರೀಗಳು ಮನದುಂಬಿ ನುಡಿದರು.

ಭಗವದ್ಗೀತೆಯು ನಮ್ಮ ಆತ್ಮಸಾಕ್ಷಾತ್ಕಾರದ ಪ್ರಯಾಣದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತದೆ, ನಿಜವಾದ, ಶಾಶ್ವತ ಸಂತೋಷವನ್ನು ಕ್ಷಣಿಕ ಆನಂದದಿಂದ ಪ್ರತ್ಯೇಕಿಸುತ್ತದೆ ಎಂದು ಪೂಜ್ಯ ಸ್ವಾಮೀಜಿ ತಿಳಿಸಿದರು.

ಭಗವದ್ಗೀತೆಯ ಈ ಉತ್ಸವ ಟೆಕ್ಸಾಸ್ ನ ಬಹಳಷ್ಟು ಕುಟುಂಬಗಳು, ಸ್ವಯಂಸೇವಕರು ಮತ್ತು ಇಡೀ ಕಾರ್ಯಕ್ರಮದ ತಂಡದ ಸಮರ್ಪಣೆ ನನ್ನ ಮನ ತುಂಬಿದೆ ಎಂದು ಶ್ರೀಗಳು ತಿಳಿಸಿದರು.

ಭಗವದ್ಗೀತೆಯ ಬೋಧನೆಗಳು ಶಾಂತಿಯುತ ಜೀವನ ಸಾಗಿಸಲು ನೆರವಾಗುತ್ತದೆ, ಇಡೀ ಕಾರ್ಯಕ್ರಮ ನನ್ನನ್ನು ಭಾವಪರವಶನನ್ನಾಗಿಸಿದೆ. ಶೀಘ್ರದಲ್ಲೇ ಈ ಪವಿತ್ರ ಆಂದೋಲನದಲ್ಲಿ 100,000 ಜನರನ್ನು ಒಳಗೊಂಡಿರುವ ಕಾರ್ಯಕ್ರಮವಾಗಿ ವಿಸ್ತರಿಸಲು ಬಯಸುತ್ತೇವೆ ಎಂದು ಶ್ರೀಗಳು ನುಡಿದರು.

ಸ್ವಾಮೀಜಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಎಸ್ ಜಿ ಎಸ್ ಗೀತಾ ಫೌಂಡೇಶನ್ ಮುಂದಿನ ದಿನಗಳಲ್ಲಿ 100,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ.

20 ಮಹಾಯಜ್ಞಗಳ ಬ್ಯಾಚ್‌ನಿಂದ 500 ಕಂಠಪಾಠ ಮತ್ತು 500 ನಿರರ್ಗಳವಾಗಿ ಓದುವ ಪದವೀಧರರು ಸಾವಿರಾರು ಹಳೆಯ ವಿದ್ಯಾರ್ಥಿಗಳ ಜೊತೆಗೆ ಗೀತೆಯನ್ನು ಒಗ್ಗಟ್ಟಿನಿಂದ ಪಠಿಸಿದರು,ಇದು ಸಿಯುಟಿಎಕ್ಸ್ ಈವೆಂಟ್ ಸೆಂಟರ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಂತೆ ಮಾಡಿತು.