ಬೆಟ್ಟಿಂಗ್ ಆ್ಯಪ್ ಮೂಲಕ ಅಕ್ರಮ ಹಣ ವರ್ಗಾವಣೆ:ಖ್ಯಾತ ನಟ,ನಟಿಯರ ವಿರುದ್ಧ ಪ್ರಕರಣ

Spread the love

ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಮೂಲಕ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನಟ-ನಟಿಯರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್ ಸೇರಿ 29 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸಿದೆ.

ನಟ, ನಟಿಯರ ಜೊತೆ ಸಾಮಾಜಿಕ ಮಾಧ್ಯಮ ಇನ್‌ಫ್ಲುಯನ್ಸರ್‌, ಯುಟ್ಯೂಬರ್‌ಗಳು ಕೂಡಾ ಈ ಪಟ್ಟಿಯಲ್ಲಿದ್ದಾರೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೆಲೆಬ್ರಿಟಿಗಳು ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಅಕ್ರಮ ಬೆಟ್ಟಿಂಗ್​ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ವ್ಯಾಪಕವಾಗಿ ಪ್ರಚಾರ ಮಾಡಿದ್ದರು. ಪ್ರಚಾರ ಮಾಡಲು ಭಾರಿ ಕಮಿಷನ್ ಜತೆಗೆ ಸಂಭಾವನೆ ಕೂಡಾ ಪಡೆದಿದ್ದಾರೆ ಎಂದು ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಅಪ್ಲಿಕೇಶನ್‌ಗಳಿಂದಾಗಿ ಸಾಲದ ಹೊರೆಯಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಹೈದರಾಬಾದ್​ ಪೊಲೀಸರು ಈಗಾಗಲೇ ಎಫ್‌ಐಆರ್‌ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ. ಹೈದರಾಬಾದ್ ಮತ್ತು ಸೈಬರಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ.

ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪ್ರಚಾರ ಪ್ರಕರಣದಲ್ಲಿ ಪಂಜಾಗುಟ್ಟ ಪೊಲೀಸರು ಈಗಾಗಲೇ ನಿರೂಪಕರಾದ ವಿಷ್ಣು ಪ್ರಿಯಾ, ರಿತು ಚೌಧರಿ, ಶ್ರೀಮುಖಿ ಮತ್ತು ಶ್ಯಾಮಾ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಇಡಿ ಅಧಿಕಾರಿಗಳು ಸೆಲೆಬ್ರಿಟಿಗಳಾದ ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್, ಶ್ರೀಮುಖಿ, ರಿತು ಚೌಧರಿ, ಆ್ಯಂಕರ್ ಶ್ಯಾಮಲಾ, ಅನನ್ಯ ನಾಗಲ್ಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.