ಟೆಕ್ಸಾಸ್‌ ಉನ್ನತ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಭಾರತ ಮೂಲದ ಗಣೇಶ್ ಠಾಕೂರ್

ಹೂಸ್ಟನ್ (ಅಮೆರಿಕ): ಭಾರತೀಯ ಮೂಲದ ಪ್ರಾಧ್ಯಾಪಕ ಗಣೇಶ್ ಠಾಕೂರ್ ಅವರನ್ನು ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತ ಮೂಲದವರು ಎಂಬ ಖ್ಯಾತಿಗೆ ಗಣೇಶ್ ಠಾಕೂರ್ ‌ಪಾತ್ರರಾಗಿದ್ದಾರೆ.

ಯುಎಚ್‌ನ ಕಲೆನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಪೆಟ್ರೋಲಿಯಂ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿರುವ ಠಾಕೂರ್ ಅವರು ಫೆಬ್ರವರಿಯಲ್ಲಿ ಈ ಸಂಸ್ಥೆಗೆ ಪ್ರಾಧ್ಯಾಪಕರಾಗಿ ಸೇರಿಕೊಂಡರು.

ಯುಎಚ್‌ನ ಸಂಶೋಧನೆಯ ಗೋಚರತೆ ಹೆಚ್ಚಿಸುವುದು ಮತ್ತು ಟೆಕ್ಸಾಸ್‌ನ ಉನ್ನತ ಸಂಸ್ಥೆಗಳಲ್ಲಿ ಸಹಯೋಗವನ್ನು ಉತ್ತೇಜಿಸುವುದು ಅವರ ಗುರಿಯಾಗಿದೆ.

ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ TAMEST ಸಂಸ್ಥೆ UH, UT ಆಸ್ಟಿನ್, ಟೆಕ್ಸಾಸ್ A&M ಮತ್ತು ಇತರ ಸಂಸ್ಥೆಗಳಿಂದ ಬುದ್ಧಿಜೀವಿಗಳನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ ಎಂದು ಠಾಕೂರ್ ಹೇಳಿದ್ದಾರೆ.

TAMEST ಯುಎಸ್ ರಾಷ್ಟ್ರೀಯ ಅಕಾಡೆಮಿಗಳ 350 ಸದಸ್ಯರು ಮತ್ತು ಎಂಟು ನೊಬೆಲ್ ಪ್ರಶಸ್ತಿ ವಿಜೇತರನ್ನು ಒಳಗೊಂಡಿದೆ. ಇದರ ಮುಂದಿನ ವಾರ್ಷಿಕ ಸಮ್ಮೇಳನ ಹವಾಮಾನ ಬದಲಾವಣೆಯ ಮೇಲೆ ಕೇಂದ್ರೀಕರಿಸಿದ್ದು, 2026ರ ಫೆಬ್ರವರಿಯಲ್ಲಿ ಸ್ಯಾನ್ ಆಂಟೋನಿಯೊದಲ್ಲಿ ನಡೆಯಲಿದೆ.

ಠಾಕೂರ್ ಅವರು ಈ ಹುದ್ದೆಯಲ್ಲಿ 2027 ರವರೆಗೆ ಮುಂದುವರಿಯಲಿದ್ದಾರೆ. ಈ ಅವಧಿಯಲ್ಲಿ ಹೂಸ್ಟನ್ ಸಂಸ್ಥೆಯನ್ನು ವಿಜ್ಞಾನ ಮತ್ತು ನಾವೀನ್ಯತೆಯ ರಾಷ್ಟ್ರೀಯ ಕೇಂದ್ರವಾಗಿ ರೂಪಿಸಲು ಯೋಜಿಸಿದ್ದಾರೆ.