ಸೆಸ್ಕ್ ಸಿಬ್ಬಂದಿಗೆ ಆರೋಗ್ಯತಪಾಸಣೆ ಶಿಬಿರ: ರಮೇಶ್ ಬಂಡಿಸಿದ್ದೇಗೌಡ ಚಾಲನೆ

Spread the love

ಮೈಸೂರು: ಸಿಬ್ಬಂದಿಯ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗೆ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ

ಶಾಸಕರೂ ಆಗಿರುವ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರು ಶಿಬಿರಕ್ಕೆ ಚಾಲನೆ ನೀಡಿದರು.

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ ಅವರು, ಜನರಿಗೆ ವಿದ್ಯುತ್ ಪೂರೈಸುವ ಸೆಸ್ಕ್ ಸಿಬ್ಬಂದಿ ತಮ್ಮ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆಯೂ ಗಮನ ಹರಿಸುವ ಅನಿವಾರ್ಯತೆ ಇದೆ, ಈ ನಿಟ್ಟಿನಲ್ಲಿ ನಿಗಮ ಕೈಗೊಂಡಿರುವ ಈ ಶಿಬಿರವು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಮೊದಲ ದಿನದ ಶಿಬಿರದಲ್ಲಿ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಗುತ್ತಿಗೆ ಹಾಗೂ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಡೇಟಾ ಎಂಟ್ರಿ ಸಿಬ್ಬಂದಿ, ವಾಹನ ಚಾಲಕರು, ನಿಗಮ ಕಚೇರಿಯ ಸಹಾಯಕ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಆರೋಗ್ಯದ ತಪಾಸಣೆ ಮಾಡಿಕೊಳ್ಳುವ ಮೂಲಕ ಶಿಬಿರದ ಲಾಭ ಪಡೆದರು.

ಶಿಬಿರದ ಎರಡನೇ ದಿನ ಪ್ರಧಾನ ಕಚೇರಿಯಲ್ಲಿ ಕರ್ತವ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

80 ಪರೀಕ್ಷೆಗಳ ಲಾಭ: ನಿಗಮದ ಪ್ರಧಾನ ಕಚೇರಿಯಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 80ಕ್ಕೂ ಹೆಚ್ಚು ತಪಾಸಣೆ ನಡೆಸಲಾಯಿತು.

ಪ್ರಮುಖವಾಗಿ ರಕ್ತ ಪರೀಕ್ಷೆ, ಥೈರಾಯ್ಡ್‌ ಪರೀಕ್ಷೆ, ಮೂತ್ರ ಪರೀಕ್ಷೆ, ಎಫ್‌ಬಿಎಸ್‌, ಎಲ್‌ಎಫ್‌ಟಿ, ಕ್ಯಾಲ್ಶಿಯಂ, ವಿಟಮಿನ್‌ ಬಿ12 ಮತ್ತು ಡಿ ಪರೀಕ್ಷೆ ಸೇರಿದಂತೆ ಇನ್ನಿತರ ತಪಾಸಣೆ ನಡೆಸಲಾಯಿತು.

ಅಂದಾಜು 7000 ರೂ. ವೆಚ್ಚವಾಗುವ ಈ ಎಲ್ಲ ತಪಾಸಣೆಗಳನ್ನು ಸಂಪೂರ್ಣ ಉಚಿತವಾಗಿ ಕಲ್ಪಿಸುವ ಮೂಲಕ ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಆರೋಗ್ಯ ಸುರಕ್ಷತೆಗೆ ಸೆಸ್ಕ್‌ ಆದ್ಯತೆ ನೀಡಿದೆ.

ಇದೇ ಸಂದರ್ಭದಲ್ಲಿ ನಿಗಮ ಕಚೇರಿಯಲ್ಲಿ ಹೊಸದಾಗಿ ನಿರ್ಮಿಸಿರುವ ಲಿಫ್ಟ್ ಅನ್ನು ರಮೇಶ್ ಬಂಡಿಸಿದ್ದೇಗೌಡ ಅವರು ಉದ್ಘಾಟಿಸಿದರು.

ಈ ವೇಳೆ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ, ಪ್ರಧಾನ ವ್ಯವಸ್ಥಾಪಕರುಗಳಾದ ಡಾ. ಬಿ.ಆರ್. ರೂಪ, ಲೋಕೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.