ಬೆಂಗಳೂರು: ಆಮ್ ಆದ್ಮಿ ಪಕ್ಷದ ಸ್ಥಳೀಯ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕಾಂಗ್ರೆಸ್ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ .ಹ್ಯಾರಿಸ್ ರನ್ನು ತಕ್ಷಣ ಬಂಧಿಸಬೇಕೆಂದು ಆಪ್ ಮುಖಂಡರು ಆಗ್ರಹಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ,ನಿನ್ನೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರು ಪ್ರದೇಶದಲ್ಲಿ ನಮ್ಮ ಪಕ್ಷದ ಸ್ಥಳೀಯ ಮುಖಂಡ ಶಿವಕುಮಾರ್ ನಾಯ್ಡು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಶಾಸಕ ಎನ್.ಎ .ಹ್ಯಾರಿಸ್ , ಸ್ಥಳೀಯ ಮಾಜಿ ಕಾರ್ಪೊರೇಟರ್ ಶ್ರೀನಿವಾಸ್ ರೆಡ್ಡಿ ಹಾಗೂ ಇನ್ನಿತರ ಗೂಂಡಾಗಳನ್ನು ಕೂಡಲೇ ಬಂಧಿಸಿ ವಿಚಾರಣೆ ಗೊಳಪಡಿಸಬೇಕೆಂದು ಆಗ್ರಹಿಸಿದರು.

ಶಾಸಕರ ವಾರ್ಡ್ ಭೇಟಿ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಶಿವಕುಮಾರ್ ನಾಯ್ಡು ಅವರ ಮೇಲೆ ಏಕಾಏಕಿ ಶಾಸಕರೇ ಈ ರೀತಿಯ ಹಲ್ಲೆ
ನಡೆಸಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಕಿಡಿಕಾರಿದರು.

ಶಾಸಕರು ಹಾಗೂ ಅವರ ಮಗ ಗೂಂಡಾ ವರ್ತನೆ ಮೂಲಕ ಶಾಂತಿನಗರವನ್ನು ರಿಪಬ್ಲಿಕ್ ನ್ನು ಮಾಡಲು ಹೊರಟಿದ್ದಾರೆ.ಇದಕ್ಕೆ ನಮ್ಮ ಪಕ್ಷವು ಎಂದಿಗೂ ಬಿಡುವುದಿಲ್ಲ. ಈಗಾಗಲೇ ಈ ಗೂಂಡಾ ಶಾಸಕರ ವಿರುದ್ಧ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ ಹಾಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸೀತಾರಾಮ ಗುಂಡಪ್ಪ ಎಚ್ಚರಿಸಿದರು.
ಆಪ್ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ ನಮ್ಮ ಪಕ್ಷದ ಮುಖಂಡ ಶಿವಕುಮಾರ್ ನಾಯ್ಡು ಇತ್ತೀಚೆಗೆ ಬ್ರಿಗೇಡ್ ರಸ್ತೆಯಲ್ಲಿ ಬಿಬಿಎಂಪಿ ಫುಟ್ಪಾತ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಬೃಹತ್ ಬಿಲ್ಡರ್ ರೊಬ್ಬರ ಹಗರಣವನ್ನು ಬಯಲಿಗಳಿದಿದ್ದರು. ಈ ರೀತಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಶಾಸಕರ ಹಾಗೂ ಅವರ ಕಡೆಯ ಗುಂಡಾಗಳು ಶಿವಕುಮಾರ್ ನಾಯ್ಡು ಅವರ ಮೇಲೆ ಸಾಕಷ್ಟು ಒತ್ತಡಗಳು ಹಾಗೂ ಬೆದರಿಕೆಯನ್ನು ಹಾಕುತ್ತಿದ್ದರು ಎಂದು ಹೇಳಿದರು.

ಈಗ ಶಾಸಕರೇ ನೇರವಾಗಿ ಹಲ್ಲೆ ನಡೆಸಿರುವುದು ಶಾಂತಿಪ್ರಿಯ ಶಾಂತಿನಗರ ಮತದಾರರಿಗೆ ಮಾಡಿರುವ ದ್ರೋಹ. ಈ ದುರ್ಘಟನೆ ನಡೆದು 20 ಗಂಟೆಗಳು ಕಳೆದರೂ ಪೊಲೀಸರು ಎಫ್ಐಆರ್ ಹಾಕಲಿಲ್ಲ,ಇದಕ್ಕೆ ಶಾಸಕ ಹ್ಯಾರಿಸ್ ಅವರ ಒತ್ತಡ ಕಾರಣ ಎಂದು ಆರೋಪಿಸಿದರು.
ಈ ಬಗ್ಗೆ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದೇವೆ. ಈ ಶಾಸಕರ ವಿರುದ್ಧ ಕೂಡಲೇ ದೂರನ್ನು ದಾಖಲಿಸಿ ಬಂದಿಸಿ ವಿಚಾರಣೆಗೊಳ ಪಡಿಸಬೇಕು ಹಾಗೂ ಶಿವಕುಮಾರ್ ನಾಯ್ಡುರವರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಪ್ರಕಾಶ್ ನೆಡುಂಗದಿ, ಹರಿಹರನ್ ,ಜಗದೀಶ್ ಚಂದ್ರ, ಅನಿಲ್ ನಾಚಪ್ಪ, ಶಶಿಧರ್ ಆರಾಧ್ಯ, ದೇವರಸಂ ಮತ್ತಿತರ ನಾಯಕರು ಉಪಸ್ಥಿತರಿದ್ದರು.