ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಕೆಲ ಸೇವೆ ರದ್ದು: ಪ್ರಕಾಶ್ ಪ್ರಿಯಾದರ್ಶನ್ ಆಕ್ರೋಶ

Spread the love

ಮೈಸೂರು: ಮೈಸೂರಿನ ಅಧಿದೇವತೆ ಶ್ರೀ ತಾಯಿ ಚಾಮುಂಡೇಶ್ವರಿ ದೇವಾಲಯದಲ್ಲಿ ಕೆಲ ಸೇವೆ ರದ್ದು ಮಾಡುವ ಮೂಲಕ ಸರ್ಕಾರ ಗ್ಯಾರೆಂಟಿ ಯೋಜನೆಗೆ ಪರೋಕ್ಷವಾಗಿ ಹಣ ಸಂಗ್ರಹಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಆರೋಪಿಸಿದ್ದಾರೆ.

ಮೈಸೂರು ಪತ್ರಕರ್ತರ‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ತಾಯಿ ಚಾಮುಂಡೇಶ್ವರಿ ದೇವಾಲಯದಲ್ಲಿ ಏಕಾಏಕಿ ಪಂಚಾಮೃತ, ಏಕವಾರ ಅಭಿಷೇಕವನ್ನು ರದ್ದು ಮಾಡುವ ಮೂಲಕ ಭಕ್ತರು 550 ರೂಗಳನ್ನು ಕೊಟ್ಟು ಅಭಿಷೇಕ ಸೇವೆ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೀಗೆ ಮಾಡುವ ಮೂಲಕ ಸರ್ಕಾರ ಹಾಗೂ ಚಾಮುಂಡಿಬೆಟ್ಟ ಪ್ರಾಧಿಕಾರ ಜನರ ಧಾರ್ಮಿಕ ಆಚರಣೆಯ ಮೇಲೆ ಕಣ್ಣಿಟ್ಟು ಗ್ಯಾರೆಂಟಿ ಯೋಜನೆಗಾಗಿ ಪರೋಕ್ಷವಾಗಿ ಹಣ ಸಂಗ್ರಹಿಸ ಹೊರಟಿದೆ ಎಂದು ಸರ್ಕಾರದ ನಡೆಯನ್ನು ಎಸ್ ಪ್ರಕಾಶ್ ಪ್ರಿಯಾದರ್ಶನ್ ತೀವ್ರವಾಗಿ ಖಂಡಿಸಿದರು.

ಕೂಡಲೇ ಪಂಚಾಮೃತ ಅಭಿಷೇಕ 220 ರೂ ಏಕವಾರ ಅಭಿಷೇಕ 300 ರೂಗಳ ಸೇವೆಯನ್ನು ಯಥಾ ಸ್ಥಿತಿ ಮುಂದುವರಿಸಿ ಭಕ್ತರ ಆಶಯಕ್ಕೆ ಧಕ್ಕೆ ಬಾರದಂತೆ ಸರ್ಕಾರ ಹಾಗೂ ಪ್ರಾಧಿಕಾರ ನಡೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.

ಯಾವುದೇ ಸೇವೆ ರದ್ದು ಮಾಡುವ ಮೊದಲು ಸಾರ್ವಜನಿಕವಾಗಿ ತಿಳಿಸುವ ಸಾಮಾನ್ಯ ಜ್ಞಾನವೂ ಇಲ್ಲದ ಪ್ರಾಧಿಕಾರದ ಕಾರ್ಯದರ್ಶಿ ಬಗ್ಗೆಯೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ದೇವಸ್ಥಾನದ ಪ್ರಾಧಿಕಾರ ರಚನೆ ಮಾಡುವ ಮೂಲಕ ಸಮಗ್ರ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದ ಸರ್ಕಾರ ಈ ರೀತಿಯ ಸೇವೆಗಳನ್ನು ರದ್ದು ಮಾಡುವ ಬದಲು ಬಿಸಿಲಿನಲ್ಲಿ ದೇವಿಯ ದರ್ಶನ ಮಾಡಲು ಭಕ್ತರು ನಡೆದು ಬರುವ ದಾರಿಯಲ್ಲಿ ನೆರಳಿನ ವ್ಯವಸ್ಥೆ ಹಾಗೂ ನೆಲಹಾಸು ಹಾಸುವ ಮೂಲಕ ಭಕ್ತರಿಗೆ ನೆರವಾಗಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಚಪ್ಪಲಿ ಸ್ಟ್ಯಾಂಡ್,ಪಾರ್ಕಿಂಗ್ ಸ್ಥಳಗಳಲ್ಲೂ ಜನರಿಗೆ ತೊಂದರೆಯಾಗದಂತೆ ಮಾಡುವ ಮೂಲಕ ನೆರವಾಗಬೇಕೆಂದು ಎಸ್.ಪ್ರಕಾಶ್ ಪ್ರಿಯದರ್ಶನ್ ಮನವಿ ಮಾಡಿದರು.

ಅಬಕಾರಿ, ಸಾರಿಗೆ, ವಿದ್ಯುತ್, ನೊಂದಣಿ ಶುಲ್ಕ ಹೀಗೆ ಅನೇಕ ರೀತಿಯ ಶುಲ್ಕವನ್ನು ಹೆಚ್ಚಳ ಮಾಡಿರುವ ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಪೂರೈಸಲು ಆಗದೆ ಧಾರ್ಮಿಕ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಪರೋಕ್ಷವಾಗಿ ಹಣ ಸಂಗ್ರಹಿಸುವ ಏಕೈಕ ಉದ್ದೇಶದಿಂದ 220 ಹಾಗೂ 300 ಗಳ ಸೇವೆಯನ್ನು ರದ್ದು ಮಾಡಿ ಹಿಂದೂ ಸಮಾಜದ ಧಾರ್ಮಿಕ ಆಚರಣೆಗೆ ಧಕ್ಕೆ ತಂದಿದೆ.

ಕೂಡಲೇ ಸೇವಾ ಶುಲ್ಕವನ್ನು ಯಥಾಸ್ಥಿತಿ ಮುಂದುವರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಶ್ರೀ ತಾಯಿ ಚಾಮುಂಡೇಶ್ವರಿ ಭಕ್ತರೊಡನೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಈ ಬಗ್ಗೆ ಹಿಂದೂ ಪರ ಸಂಘಟನೆಗಳು ಧ್ವನಿ ಎತ್ತಬೇಕೆಂದು ಪ್ರಕಾಶ ಪ್ರಿಯದರ್ಶನ್
ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಉಪಾಧ್ಯಕ್ಷರಾದ ಫಾಲ್ಕಾನ ಬೋರೆಗೌಡ, ಹಿಂದುಳಿದ ವರ್ಗದ ನಗರ ಅಧ್ಯಕ್ಷ ಪಿ ಕುಮಾರ್, ನಗರ ಎಸ್ಟಿ ಮೋರ್ಚಾ ಅಧ್ಯಕ್ಷ ಮಧುವನ ಚಂದ್ರು, ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಪಿ ಎಸ್ ರಾಜಶೇಖರ ಮೂರ್ತಿ, 51ನೇ ವಾರ್ಡಿನ ಅಧ್ಯಕ್ಷ ಸಾಹಸ್ ಉಪಸ್ಥಿತರಿದ್ದರು.