ಚಂಡೀಗಢ: ಪಂಜಾಬ್ನ ಅಮೃತಸರದಲ್ಲಿ ನಕಲಿ ಮದ್ಯ ಸೇವಿಸಿ 15 ಜನರು ಮೃತಪಟ್ಟಿದ್ದಾರೆ.
ಜತೆಗೆ ಆರು ಮಂದಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದೆ.
ಭಂಗಾಲಿ, ಪಾತಾಳಪುರಿ, ಮರಾರಿ ಕಾಲನ್, ಥೆರೆವಾಲ್ ಮತ್ತು ತಲ್ವಂಡಿ ಘುಮಾನ್ ಎಂಬ ಐದು ಗ್ರಾಮಗಳ 15 ಜನ ಮೃತಪಟ್ಟಿರುವುದಾಗಿ ಅಮೃತಸರ ಉಪ ಆಯುಕ್ತರಾದ ಸಾಕ್ಷಿ ತಿಳಿಸಿದ್ದಾರೆ.
ಈ ಗ್ರಾಮಗಳ ಪರಿಸ್ಥಿತಿಯನ್ನು ಅವಲೋಕಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣಿಂದರ್ ಸಿಂಗ್ ಮತ್ತಿತರ ಅಧಿಕಾರಿಗಳು ತೆರಳಿದ್ದಾರೆ.
ಪ್ರಬ್ಬಿತ್ ಸಿಂಗ್, ಕುನ್ನೀರ್ ಸಿಂಗ್, ಸಾಹಿಬ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ನಿಂದರ್ ಕೌರ್ ಬಂಧಿತ ಆರೋಪಿಗಳು.ಇವರ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸಾವಿನ ಸಂಖ್ಯೆ ಏರಿಕೆಯಾಗುವನ್ನು ತಡೆಯಲು, ಆರೋಗ್ಯ ತಂಡಗಳು ಮತ್ತುಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಐದು ಗ್ರಾಮಗಳಲ್ಲಿ ಗಸ್ತು ತಿರುಗಿ ನಕಲಿ ಮದ್ಯ ಸೇವಿಸಿದವರನ್ನು ಹುಡುಕಿ ಚಿಕಿತ್ಸೆ ನೀಡುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ನಕಲಿ ಮದ್ಯ ಪೂರೈಕೆ ಮತ್ತು ತಯಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ತಯಾರಕರನ್ನು ಹುಡುಕಲು ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಪಂಜಾಬ್ ಸರ್ಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ ಎಂದು ಅಮೃತಸರದ ಎಸ್ಎಸ್ಪಿ ಮಣೀಂದರ್ ಸಿಂಗ್ ಹೇಳಿದ್ದಾರೆ.