ಮುಡ ಆಸ್ತಿ ವಶ ಪ್ರಕರಣ;2017 ರಲ್ಲಿ ದಾಖಲಾಗಿದ್ದ ಎಫ್ಐಆರ್-ಈಗ ಲೋಕಾದಿಂದ 18 ಮಂದಿಗೆ ನೋಟೀಸ್

Spread the love

ಮೈಸೂರು: ಉಳ್ಳವರಿಗೆ ಹಂಚಿಕೆ ಮಾಡಿದ್ದ ಮುಡ ಆಸ್ತಿಯನ್ನು ವಶಕ್ಕೆ ಪಡೆಯುವಂತೆ 2017ರಲ್ಲಿ ಆರ್ ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದ ಕುರಿತು ದಾಖಲಾಗಿರುವ ಎಫ್ ಐಆರ್ ಗೆ ಈಗ ಮತ್ತೆ ಜೀವ ಬಂದಿದೆ.

ಈ ಸಂಬಂಧ ಇದೀಗ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಮೂರು ದಿನಗಳ‌ ಒಳಗೆ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ.

ಸರ್ವೆ ನಂ.89 ಹಿನಕಲ್, ವಿಜಯ ನಗರ 2 ನೇ ಹಂತ, ಮೈಸೂರು ಇಲ್ಲಿ ಪ್ರಾಧಿಕಾರದ 7 ಎಕರೆ 18 ಗುಂಟೆ ಜಮೀನನ್ನ ವಿಜಯ ನಗರ 2 ನೇ ಹಂತದ ಬಡಾವಣೆ ನಿರ್ಮಿಸಲು ಭೂ ಸ್ವಾದೀನಪಡಿಸಿಕೊಳ್ಳಲಾಗಿತ್ತು.

1996-97 ರಲ್ಲಿ ಹಿನಕಲ್ ಪಂಚಾಯತಿಯ ಅಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮತ್ತು ಅಂದಿನ ಸದಸ್ಯರುಗಳು ಹಿನಕಲ್ ಬಡಜನರಿಗೆ ಆಶ್ರಯ ನಿವೇಶನ ರಚಿಸಿ ಹಂಚುತ್ತೇವೆ ಎಂದು ಪ್ರಾಧಿಕಾರದ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಪ್ರಾಧಿಕಾರದ ಅನುಮತಿ ಪಡೆಯದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರದ ಆಸ್ತಿಯಲ್ಲಿ ಸುಮಾರು 350 ಕ್ಕೂ ಹೆಚ್ಚು 25*25 ಅಳತೆಯ ನಿವೇಶನಗಳನ್ನು ರಚಿಸಿದ್ದರು.

ಈ ನಿವೇಶನಗಳನ್ನ ಬಿಎಂಎಲ್ ನೌಕರರಿಗೆ, ಶಾಲಾ ಶಿಕ್ಷಕರಿಗೆ, ಪಂಚಾಯತ್ ಪಿಡಿಒ ಗಳಿಗೆ, ಪೋಸ್ಟ್ ಆಫೀಸ್ ನೌಕರರಿಗೆ, ಸರ್ಕಾರಿ ನೌಕರರಿಗೆ, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಇನ್ನಿತರ ಉಳ್ಳವರಿಗೆ ಹಂಚಿಕೆ ಮಾಡಿದ್ದರು.

ಈ ಸಂಬಂಧ 2017ರಲ್ಲಿ ಗಂಗರಾಜು ಎಂಬುವವರು ಪ್ರಾಧಿಕಾರದ ಆಸ್ತಿಯನ್ನು ವಶಕ್ಕೆ ಪಡೆಯಲು ಪ್ರಾಧಿಕಾರಕ್ಕೆ ಹಾಗೂ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಎಫ್ಐಆರ್ ದಾಖಲು ಮಾಡಲು ಸರ್ಕಾರದಿಂದ ಅನುಮತಿ ನೀಡಲಾಗಿತ್ತು.

ಅಂತೆಯೇ 2022ರಲ್ಲಿ ಎಸಿಬಿ ಎಫ್ಐಆರ್ ದಾಖಲು ಮಾಡಿದ್ದು ಇದು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿತ್ತು.

ಈಗ ಲೋಕಾಯುಕ್ತ ಪೊಲೀಸರು ಪ್ರಾಧಿಕಾರದ 18 ಅಧಿಕಾರಿಗಳಿಗೆ ವಿಚಾರಣೆಗೆ 3 ದಿವಸದೊಳಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮುಡಾ ಸೂಪರಿಂಟೆಂಡೆಂಟ್, ಇಂಜಿನಿಯರ್, ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.