ವ್ಯಾಟಿಕನ್ ಸಿಟಿ(ಯುರೋಪ್): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಅವರು ವಿಧಿವಶರಾಗಿದ್ದಾರೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ವ್ಯಾಟಿಕನ್ ಸಿಟಿಯ ಕಾರ್ಡಿನಲ್ ಕೆವಿನ್ ಫಾರೆಲ್ ಅವರು,ಆತ್ಮೀಯ ಸಹೋದರ, ಸಹೋದರಿಯರೇ, ಪೋಪ್ ಫ್ರಾನ್ಸಿಸ್ ಅವರು ಮೃತಪಟ್ಟಿದ್ದಾರೆ ಎಂಬುದನ್ನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ. ಸೋಮವಾರ ಬೆಳಿಗ್ಗೆ 7.35 ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ರೋಮ್ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥರಾಗಿದ್ದ ಪೋಪ್ ಅವರು ಬಡವರು, ದೀನದಲಿತರಿಗಾಗಿ ಶ್ರಮಿಸಿದವರು.ಅವರಿಗೆ 88 ವರ್ಷಗಳಾಗಿತ್ತು.
ಇತ್ತೀಚೆಗೆ ಪೋಪ್ ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದ ಬಗ್ಗೆ ಭಕ್ತರಲ್ಲಿ ತೀವ್ರ ಕಳವಳ ಮೂಡಿಸಿತ್ತು.
ಫೆಬ್ರವರಿ 14ರಂದು, ಪೋಪ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರಿಗೆ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ರಕ್ತಹೀನತೆಯಿಂದಲೂ ಬಳಲುತ್ತಿದ್ದ ಅವರಿಗೆ ರಕ್ತ ವರ್ಗಾವಣೆ ಮಾಡಲಾಗಿತ್ತು.
ಫೆಬ್ರವರಿ 22ರಂದು, ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರಿಗೆ ಕೃತಕ ಆಕ್ಸಿಜನ್ ಅಳವಡಿಸಲಾಗಿತ್ತು. ಶ್ವಾಸಕೋಶ ಸಮಸ್ಯೆ ಮತ್ತು ಮೂತ್ರಪಿಂಡ ವೈಫಲ್ಯ ಕೂಡಾ ಉಂಟಾಗಿತ್ತು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ತಿಂಗಳುಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿತ್ತು.
16ನೇ ಬೆನೆಡಿಕ್ಟ್ ಅವರ ರಾಜೀನಾಮೆ ಬಳಿಕ ಪೋಪ್ ಫ್ರಾನ್ಸಿಸ್ ಅವರು 2013ರಲ್ಲಿ ರೋಮ್ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥರಾಗಿದ್ದರು. ಅವರ ಅಗಲಿಕೆಯಿಂದ ಹೊಸ ಪೋಪ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ.