ದುಬೈ: ದುಬೈನ ಬೇಕರಿಯೊಂದರಲ್ಲಿ ಪಾಕಿಸ್ತಾನಿ ಪ್ರಜೆ ಧಾರ್ಮಿಕ ಘೋಷಣೆಗಳನ್ನು ಕೂಗಿ ದಾಳಿ ಮಾಡಿದ ಪರಿಣಾಮ ತೆಲಂಗಾಣದ ಇಬ್ಬರು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದವರನ್ನು ನಿರ್ಮಲ್ ಜಿಲ್ಲೆಯ ಸೋನ ಗ್ರಾಮದ ಅಷ್ಟಪು ಪ್ರೇಮ್ಸಾಗರ್ (35), ಹಾಗೂ ನಿಜಾಮಾಬಾದ್ನ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಸಾಗರ್ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರೇಮಸಾಗರ್ ಕಳೆದ ಐದಾರು ವರ್ಷಗಳಿಂದ ಘಟನೆ ನಡೆದ ಬೇಕರಿಯಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಬಂದು ಹೋಗಿದ್ದರಂತೆ.
ಪ್ರೇಮಸಾಗರನ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು. ಹಾಗೂ ಪ್ರೇಮಸಾಗರ್ ಅವರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅವರಿಗೆ ನೆರವು ನೀಡಬೇಕು ಎಂದು ಅವರ ಚಿಕ್ಕಪ್ಪ
ಮನವಿ ಮಾಡಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು
ದುಃಖ ವ್ಯಕ್ತಪಡಿಸಿದ್ದು, ಪಾರ್ಥೀವ ಶರೀರಗಳನ್ನು ಭಾರತಕ್ಕೆ ತರಲು ಸಹಾಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಿಶನ್ ರೆಡ್ಡಿ,ದುಬೈನಲ್ಲಿ ತೆಲಂಗಾಣದ ಇಬ್ಬರು ಯುವಕರು ಹತ್ಯೆಯಾಗಿರುವುದು ತೀವ್ರ ಆಘಾತ ತಂದಿದೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಅವರ ಜೊತೆಗೆ ಮಾತನಾಡಿದ್ದೇನೆ. ಅವರು ದುಃಖಿತ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುವ ಹಾಗೂ ಪಾರ್ಥೀವ ಶರೀರಗಳನ್ನು ತುರ್ತು ಭಾರತಕ್ಕೆ ತರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.