ಪರಿಶಿಷ್ಟರ ಹಣ ದುರ್ಬಳಕೆ, ಓಲೈಕೆ ರಾಜಕಾರಣದ ಬಜೆಟ್‌: ಅಶೋಕ್

Spread the love

ಬೆಂಗಳೂರು, ಮಾ.13: ಕಾಂಗ್ರೆಸ್‌ ಸರ್ಕಾರ ಕಳೆದ ವರ್ಷ ಮಂಡಿಸಿದ ಬಜೆಟ್‌ನಲ್ಲೇ ಅನೇಕ ಘೋಷಣೆಗಳನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ದೂರಿದರು.

ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ಹಣವನ್ನು ದುರ್ಬಳಕೆ ಮಾಡಲಾಗಿದೆ. ಓಲೈಕೆ ರಾಜಕಾರಣವನ್ನು ಮಾಡಲಾಗಿದೆ. ಈ ಎಲ್ಲಕ್ಕೂ ಸರ್ಕಾರ ಉತ್ತರ ನೀಡಬೇಕು. ಮುಂದಿನ ಒಂದು ವರ್ಷ ಯಾವುದೇ ರೀತಿಯ ತೆರಿಗೆಗಳನ್ನು ಜನರ ಮೇಲೆ ಹೇರಬಾರದು ಎಂದು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಶೋಕ್, ಇದು ದೂರದೃಷ್ಟಿಯ ಬಜೆಟ್‌ ಅಲ್ಲ. ಬದಲಾಗಿ ತುರ್ತಾಗಿ ರೂಪಿಸಿರುವ ಬಜೆಟ್‌. ಇದರಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಆರ್ಥಿಕಾಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿದರು.

ಒಂದು ಗುಟುಕು ನೀರು ಕೊಡಿ ಎಂದು ಬಜೆಟ್‌ನಲ್ಲಿ ಕವನ ಉಲ್ಲೇಖಿಸಲಾಗಿದೆ. ಆದರೆ ವಿಶ್ವವಿದ್ಯಾಲಯಗಳಿಗೆ ಅನುದಾನವಿಲ್ಲದೆ ವಿದ್ಯಾರ್ಥಿಗಳು ವಿಷ ಕೊಡಿ ಎಂದು ಕೇಳುತ್ತಿದ್ದಾರೆ. ಕಾಂಗ್ರೆಸ್‌ ಶಾಸಕರೇ ಅನುದಾನವಿಲ್ಲದೆ ವಿಷ ಕೊಡಿ ಎಂದು ಹೇಳುತ್ತಿದ್ದಾರೆ. ಶಾಸಕ ರಾಜು ಕಾಗೆ ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೂಡ ಇದನ್ನೇ ಹೇಳುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂಡವಾಳ ವೆಚ್ಚಕ್ಕೆ ಶೇ 17.8 ಖರ್ಚು ಮಾಡಲಾಗುತ್ತಿದೆ. ಪ್ರತಿ ವರ್ಷ 26,474 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ರಾಜಸ್ವ ಕೊರತೆ 19,262 ಕೋಟಿ ರೂ. ಇದೆ. ಅಂದರೆ 0.63% ಇದೆ. ಸಾಲದ ಹೊರೆ 7,64,655 ಕೋಟಿ ರೂ. ಇದೆ. ಅಂದರೆ 24% ಇದೆ ಎಂದು ಹೇಳಿದರು.

ಬಿಜೆಪಿ ಸರ್ಕಾರವಿದ್ದಾಗ 2021-22 ರಲ್ಲಿ 80,641 ಕೋಟಿ ರೂ. ಸಾಲ ಪಡೆಯಲಾಗಿತ್ತು. ಆಗ ಕೋವಿಡ್‌ ಸಮಯಯವಾಗಿದ್ದು, 50% ಆದಾಯ ಕುಸಿತವಾಗಿತ್ತು. 2022-23 ರಲ್ಲಿ 44,549 ಕೋಟಿ ರೂ. ಸಾಲ ಪಡೆಯಲಾಯಿತು. ಸಿದ್ದರಾಮಯ್ಯನವರು ಬಂದ ನಂತರ ಮೊದಲಿಗೆ 90,280 ಕೋಟಿ ರೂ., ನಂತರ 1,07,006 ಕೋಟಿ ರೂ., ಈಗ 1,16,000 ಕೋಟಿ ರೂ. ಸಾಲ ಪಡೆಯಲಾಗಿದೆ. ಒಟ್ಟು 7,81,095 ಕೋಟಿ ರೂ. ಸಾಲವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬರೇ 4,91,000 ಕೋಟಿ ರೂ. ಸಾಲ ಮಾಡಿದ್ದಾರೆ. ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯನವರ ಪಾಲು 63% ರಷ್ಟಿದೆ ಎಂದು ಟೀಕಿಸಿದರು.

ಬಂಡವಾಳ ವೆಚ್ಚ ಕ್ರಮೇಣ ಕಡಿಮೆಯಾಗಿದೆ. ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿಗಾಗಿ ಅನುದಾನ ನೀಡಿಲ್ಲ. ಕಳೆದ ಬಾರಿ 1.89 ಲಕ್ಷ ಕೋಟಿ ರೂ. ಆದಾಯ ಅಂದಾಜು ಮಾಡಿದ್ದರೂ ಅಷ್ಟು ಬರಲಿಲ್ಲ. ಈ ಬಾರಿ 2.08 ಲಕ್ಷ ಕೋಟಿ ರೂ. ಗುರಿ ಇದೆ. ಅಷ್ಟು ಬರಲು ಸಾಧ್ಯವೇ ಇಲ್ಲ. ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಗುರಿ ನೀಡಿದ್ದು, ಮದ್ಯ ಸೇವಿಸುವವರು ಹೆಚ್ಚಾಗಲಿ ಎಂಬುದು ಇದರ ಆಶಯ. ಸಾಲ ಮಾಡುವುದು ಸಮಸ್ಯೆ ಅಲ್ಲ. ಆದರೆ ಮಾಡಿದ ಸಾಲವನ್ನು ಹೇಗೆ ಬಳಸುತ್ತೀರಿ ಎಂಬುದು ಮುಖ್ಯ ಎಂದು ಅಶೋಕ ಪ್ರಶ್ನಿಸಿದರು.

2017 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಭಾಷಣ ಮಾಡಿದ್ದರು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಪಡೆಯಬೇಕು. ತೆಗೆದುಕೊಂಡ ಸಾಲವನ್ನು ಆಸ್ತಿ ಸೃಜನೆಗೆ ಖರ್ಚು ಮಾಡಬೇಕು ಎಂದು ಅವರು ಹೇಳಿದ್ದರು. ಆದರೆ ಈಗ ಕಾಂಗ್ರೆಸ್‌ ಸಾಲ ಪಡೆದು ಆ ಹಣವನ್ನು ರಾಜಕೀಯಕ್ಕೆ ಬಳಸುತ್ತಿದೆ, ಪ್ರಣಾಳಿಕೆಗೆ ಬಳಸುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಸಮುದಾಯಕ್ಕೆ ಹೆಚ್ಚು ಅನುದಾನ ನೀಡಬೇಕೆಂದು ಈ ಹಿಂದೆಯೇ ಯೋಜನಾ ಆಯೋಗ ಹೇಳಿದೆ. ಪರಿಶಿಷ್ಟರಲ್ಲಿ ಲಿಂಗಾನುಪಾತ ಕಡಿಮೆಯಾಗುತ್ತಿದೆ. ಸಾಕ್ಷರತೆ, ಶಿಶು ಮರಣ, ಲಸಿಕೆ, ಕೆಲಸ, ವಿದ್ಯುತ್‌ ಸೌಲಭ್ಯ, ಕುಡಿಯುವ ನೀರು, ಜಮೀನು ಒಡೆತನ ಮೊದಲಾದವುಗಳಲ್ಲಿ ಅವರು ಹಿಂದುಳಿದಿದ್ದಾರೆ. ಇಂದಿನ ಪರಿಶಿಷ್ಟರ ಪರಿಸ್ಥಿತಿ ಹೇಗಿದೆ ಎಂದು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.

42,000 ಕೋಟಿ ರೂ. ಹಣವನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿ ಗೆ ನೀಡಲಾಗಿದೆ. ಅಂಗನವಾಡಿ ಕಟ್ಟಡ ನಿರ್ಮಿಸಲು ಪರಿಶಿಷ್ಟರಿಗೆ ಸೇರಿದ 4 ಕೋಟಿ ರೂ. ಖರ್ಚು ಮಾಡಲಾಗಿದೆ. ಪ್ರವಾಸೋದ್ಯಮಕ್ಕೂ ಈ ಹಣ ಬಳಸಲಾಗಿದೆ. ಆದರೆ ಇದರಿಂದ ಯಾವ ಪರಿಶಿಷ್ಟರಿಗೆ ಅನುಕೂಲವಾಗಿದೆ, ಅರಣ್ಯ ಇಲಾಖೆಯಡಿ ಹುಲಿ ಹಾಗೂ ಆನೆ ಯೋಜನೆಗೆ ಈ ಹಣವನ್ನು ಬಳಸಲಾಗಿದೆ. ಗ್ರೀನ್‌ ಇಂಡಿಯಾ ಮಿಶನ್‌ಗೆ 34 ಕೋಟಿ ರೂ. ನೀಡಲಾಗಿದೆ ಎಂದು ಕಿಡಿಕಾರಿದರು.

ಪರಿಶಿಷ್ಟರಿಗೆ ಮಾತ್ರ ಹಣ ಮೀಸಲಿಡಬೇಕು ಎಂದು ಕೇಂದ್ರ ಸರ್ಕಾರ ಬಹಳ ಹಿಂದೆಯೇ ಹೇಳಿದೆ. ಈ ಸ್ವಾತಂತ್ರ್ಯವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಬೇಕು. ಆದರೆ ಇಲಾಖೆಗೆ ಆ ಸ್ವಾತಂತ್ರ್ಯವೇ ಇಲ್ಲ. ಈ ಕುರಿತು ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಪತ್ರ ಬರೆದು ಸೂಚನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸ್ವಲ್ಪ ಗೌರವ ತಂದುಕೊಡಿ ಎಂದು ಸಲಹೆ ನೀಡಿದರು ಅಶೋಕ.

34.25 ಕೋಟಿ ರೂ. ಬಿಎಂಟಿಸಿಗೆ, 42 ಕೋಟಿ ರೂ. ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ. ಶಕ್ತಿ ಯೋಜನೆಗೆ ಒಟ್ಟು 800 ಕೋಟಿ ರೂ. ನೀಡಲಾಗಿದೆ. ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸುವ ಪರಿಶಿಷ್ಟರನ್ನು ಕಂಡುಹಿಡಿಯುವುದು ಹೇಗೆ? ಅಂದಾಜಿನ ಮೇಲೆ ಈ ಹಣವನ್ನು ಹಂಚಿಕೆ ಮಾಡುವುದು ಅಸಾಧ್ಯ. ಇದು ಪರಿಶಿಷ್ಟರಿಗೆ ಮಾಡಿದ ಮೋಸ. ಪರಿಶಿಷ್ಟರು ಕೂಡ ನಮ್ಮ ಹಕ್ಕು ನಮ್ಮ ಹಣ ಎಂದು ಘೋಷಣೆ ಕೂಗಿದರೆ ಸರ್ಕಾರ ಏನು ಮಾಡುತ್ತದೆ ಎಂದು ಪ್ರಶ್ನಿಸಿದರು.