ಮಟ್ಟನವಿಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜ್ಞಾನ ಸೃಜನ ವಿಶೇಷ ಕಾರ್ಯಕ್ರಮ

Spread the love

ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕಿನ ಮಟ್ಟನವಿಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜ್ಞಾನ ಸೃಜನ ವಿಶೇಷ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.

ಬೆಂಗಳೂರಿನ ಜಲಮಂಡಳಿಯ ರುದ್ರೇಗೌಡರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಾಲೆಗೆ ನಾಮಫಲಕವನ್ನು ದಾನವಾಗಿ ನೀಡಿದರು.

ಈ ವೇಳೆ ಮಾತನಾಡಿದ ರುದ್ರೇಗೌಡರು ಈ ಸರ್ಕಾರಿ ಶಾಲೆಯನ್ನು ಊರಿನ ಜನರಿಂದ ಒಂದು ರೂಪಾಯಿ ಎರಡು ರೂಪಾಯಿಯಂತೆ ದೀಣಿಗೆ ಸಂಗ್ರಹಿಸಿ ಕಟ್ಟಿದ್ದಾರೆ. ಮೊದಲು ಹೆಂಚಿನ ಮನೆಯಲ್ಲಿದ್ದ ಈ ಶಾಲೆ ಈಗ ಕಟ್ಟಡವಾಗಿ ಮಾರ್ಪಟ್ಟಿರುವುದು ಸಂತೋಷ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೀಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆಗೊಂಡ ಅತ್ಯುತ್ತಮ ಶಿಕ್ಷಕರಿಂದ ಕೂಡಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕೆಂದು ಪೋಷಕರಲ್ಲಿ ತಿಳುವಳಿಕೆ ಮೂಡಿಸಿದರು.

ಈ ವೇಳೆ ಶಾಲೆಗೆ ಕುಡಿಯುವ ನೀರಿನ ಘಟಕವನ್ನು ದಾನ ಮಾಡಿದ ದಾನಿಗಳು, ನಾಮ ಫಲಕ ನೀಡಿದ ರುದ್ರೇಗೌಡರು, ಮಟ್ಟ ನಾವಿಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಕಲಾ, ಕ್ಷೇತ್ರ ಶಿಕ್ಷಣಾಧಿಕಾರಿ ದೀಪ, ಬಿಆರ್ ಸಿ ಅನಿಲ್ ಕುಮಾರ್, ಶಿಕ್ಷಣ ಸಂಯೋಜಕ ಜೆ.ಇ ಲೋಕೇಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅರುಣ್ ಕುಮಾರ್ ಮತ್ತಿತರರನ್ನು ಸನ್ಮಾನಿಸಲಾಯಿತು.

2023 – 24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಶಾಲೆಯ ನಂದಿನಿ ಬಿ ಆರ್, ಯೋಗರಾಜ್, ತನುಶ್ರೀ ಎಂಬ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಗೌರವಿಸಲಾಯಿತು. ಕೆಲವು ಪೋಷಕರು ಮತ್ತು ಶಿಕ್ಷಕರು ಸ್ವಯಂ ಪ್ರೇರಿತರಾಗಿ ಈ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದ್ದು ವಿಶೇಷವಾಗಿತ್ತು.

ಶಾಲೆಯ ಮುಖ್ಯೋಪಾಧ್ಯಾಯರಾದ ಕೆ ಭಾಗ್ಯಲಕ್ಷ್ಮಿ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಜರಿದ್ದರು.