ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.
ಆಗಸ್ಟ್ 19, ಆಗಸ್ಟ್ 29 ಮತ್ತು ಆಗಸ್ಟ್ 31ರಂದು ಮೂರು ದಿನಗಳ ಕಾಲ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ನಡೆದಿದೆ.
ಶನಿವಾರ ಬೆಳಗ್ಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ಮುಂದುವರೆಯಿತು. ಕರ್ನಾಟಕ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠದ ಮುಂದೆ ಸುಧೀರ್ಘ ಕಾಲ ವಾದವನ್ನು ಮಂಡಿಸಿದರು.
ಭೋಜನ ವಿರಾಮದವರೆಗೆ ವಾದ ಆಲಿಸಿದ ನ್ಯಾಯಪೀಠ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿತ್ತು,ನಂತರ ಕೋರ್ಟ್ ಕಲಾಪ ಮತ್ತೆ ಆರಂಭವಾದಾಗ ಸಂಜೆಯವರೆಗೂ ನ್ಯಾಯಪೀಠದಲ್ಲಿ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ಮುಂದುವರೆಯಿತು. ಕೋರ್ಟ್ ವಿವಿಧ ದೂರುದಾರರ ವಾದವನ್ನು ಆಲಿಸಿತು. ಬಳಿಕ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 2ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 2ರ ತನಕ ಮುಂದೂಡಿಕೆ ಮಾಡಿದೆ. ಆದ್ದರಿಂದ ಆಗಸ್ಟ್ 19ರಂದು ಹೊರಡಿಸಿರುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶ ಮುಂದುವರೆಯಲಿದೆ. ಆದ್ದರಿಂದ ಸೋಮವಾರದ ತನಕ ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಿದೆ.
ಶನಿವಾರ ಸಿದ್ದರಾಮಯ್ಯ ಅರ್ಜಿಯ ವಿಚಾರಣೆ ವೇಳೆ ರಾಜ್ಯಪಾಲರ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಒಟ್ಟು 5 ಅಂಶಗಳ ಆಧಾರದ ಮೇಲೆ ಅವರು ವಾದ ಮಂಡಿಸಿ ರಾಜ್ಯಪಾಲರ ಕ್ರಮ, ಸಂಪುಟ ಸಭೆಯ ನಡಾವಳಿ, ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದರು.
ತುಷಾರ್ ಮೆಹ್ತಾ ವಾದ ಮಂಡನೆ ಬಳಿಕ ಮತ್ತೊಬ್ಬ ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ಮಣೀಂದರ್ ಸಿಂಗ್ ವಾದ ಮಂಡಿಸಿದರು. ಒಟ್ಟು ಮೂರು ಅಂಶಗಳನ್ನು ಮುಂದಿಟ್ಟುಕೊಂಡು ಮಣೀಂದರ್ ಸಿಂಗ್ ವಾದ ಮಂಡಿಸಿದರು. ಬಳಿಕ ಕೋರ್ಟ್ ಕಲಾಪವನ್ನು 2.30ಕ್ಕೆ ಮುಂದೂಡಿತು.
ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗ ದೂರುದಾರ ಪ್ರದೀಪ್ ಕುಮಾರ್ ಪರ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಬಳಿಕ ಟಿ. ಜೆ. ಅಬ್ರಾಹಂ ಪರವಾಗಿ ರಂಗನಾಥ್ ರೆಡ್ಡಿ ವಾದ ಮಂಡಿಸಿದರು. ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಲು ಕೆ. ಜಿ. ರಾಘವನ್ ಕಾಲಾವಕಾಶ ಕೋರಿದ್ದಾರೆ. ಸೋಮವಾರ ಮಧ್ಯಾಹ್ನ ಅವರು ವಾದ ಮಂಡಿಸಲು ಅವಕಾಶ ನೀಡಲಾಗುತ್ತದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ.
ಇದನ್ನು ರದ್ದುಪಡಿಸಬೇಕು ಎಂದು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.