ಬೆಂಗಳೂರು: ಮುಡಾ ಕೇಸ್ ತನಿಖೆಯನ್ನ ಹೈಕೋರ್ಟ್, ಸಿಬಿಐಗೆ ಕೊಡೋದು ಬೇಡ ಅಂತ ಹೇಳಿದೆಯೇ ಹೊರತು ಸಿದ್ದರಾಮಯ್ಯ ಮತ್ತು ಅವರ ಕುಟುಂಬ ನಿರಪರಾಧಿ ಅಂತ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಮುಡಾ ಕೇಸನ್ನು ಸಿಬಿಐ ತನಿಖೆಗೆ ಕೊಡಬೇಕು ಎಂಬ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸ್ನೇಹಮಯಿ ಕೃಷ್ಣ ಹೈಕೋರ್ಟ್ನಲ್ಲಿ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಬೇಕು ಅಂತ ಅರ್ಜಿ ಹಾಕಿದ್ದರು ಕೋರ್ಟ್ ಅವರ ಅರ್ಜಿ ವಜಾ ಮಾಡಿದೆ. ಸಿಬಿಐಗೆ ಕೊಡೋ ಅರ್ಜಿ ಮಾತ್ರ ಕೋರ್ಟ್ ವಜಾ ಮಾಡಿದೆ. ಆದರೆ, ಸಿದ್ದರಾಮಯ್ಯ ನಿರಪರಾಧಿ ಅಂತ ಹೇಳಿಲ್ಲ ಎಂದು ತಿಳಿಸಿದರು.
ಬಿಜೆಪಿ ಮುಡಾ ಅಕ್ರಮದ ವಿರುದ್ದ ಹೋರಾಟ ಮಾಡಿತ್ತು. ಪಾದಯಾತ್ರೆ ಕೂಡಾ ಮಾಡಿತ್ತು, ಕೋರ್ಟ್ ತೀರ್ಪಿನಿಂದ ನಮ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ,ಮುಡಾ ಅಕ್ರಮದ ಬಗ್ಗೆ ಇಡಿ, ಲೋಕಾಯುಕ್ತ ತನಿಖೆ ನಡೆಯುತ್ತಿದೆ,ಮುಂದೇನಾಗಲಿದೆ ನೋಡೋಣ ಎಂದು ಹೇಳಿದರು.
ನಾವು ಹೋರಾಟ ಮಾಡಿದ್ದು ಸಿಎಂ ಮತ್ತು ಅವರ ಕುಟುಂಬ ಮುಡಾ ಅಕ್ರಮದಲ್ಲಿ ಭಾಗಿಯಾಗಿದೆ ಅಂತ,ನಮ್ಮ ಆರೋಪಕ್ಕೆ ನಾವು ಈಗಲೂ ಬದ್ಧ ಎಂದು ವಿಜಯೇಂದ್ರ ತಿಳಿಸಿದರು.