ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಅಮಾನತು

Spread the love

ಮೈಸೂರು: ‌ ಕ್ರಮಬದ್ದವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅವರನ್ನ ಅಮಾನತು ಪಡಿಸಲಾಗಿದೆ.

ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ಲತಾ ಅವರ ಆದೇಶದ ಮೇರೆಗೆ ಮುಡಾ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ.

ಆರ್.ಟಿ.ಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅವರು ನೀಡಿದ ದೂರಿನ ಅನ್ವಯ ದಾಖಲೆಗಳನ್ನ ಪರಿಶೀಲಿಸಿ ಅವರು ಕ್ರಮ ಕೈಗೊಂಡಿದ್ದಾರೆ.

ಮೈಸೂರಿನ ಗೋಕುಲಂ ಬಡಾವಣೆ 3 ನೇ ಹಂತ ಮನೆ ಸಂಖ್ಯೆ 867 ಕ್ಕೆ 02-04-1982 ರಂದು ಲಿಲಿಯನ್ ಶಾರದಾ ಜೋಸೆಫ್ ವೈ/ಆಫ್ ಅನ್ನಿ ಜೋಸೆಫ್ ಎಂಬುವರಿಗೆ ಮುಡಾ ದಿಂದ 30*40 ವಿಸ್ತೀರ್ಣದ ನಿವೇಶನ ಮಂಜೂರಾಗಿದೆ.ಇದಕ್ಕೆ ಕರಾರು ಪತ್ರ ಸಹ ನೀಡಲಾಗಿದೆ.

03-09-1983 ರಲ್ಲಿ ಲಿಲಿಯನ್ ಜೋಸೆಫ್ ಮರಣ ಹೊಂದಿದ್ದಾರೆ.06-04-2024 ರ ವರೆಗೂ ಆ ಸ್ವತ್ತು ಯಾರಿಗೂ ವರ್ಗಾವಣೆ ಆಗಿರಲಿಲ್ಲ.ಆದರೆ 26-03-2024 ರಂದು ಕ್ರಮಬದ್ದ ವಾರಸುದಾರರಲ್ಲದವರಿಗೆ ಅಂದರೆ ನೆವಿಲ್ ಮಾರ್ಕಸ್ ಜೋಸೆಫ್ ಅವರ ಹೆಸರಿಗೆ ಕ್ರಮಬದ್ದ ವಂಶವೃಕ್ಷ ಪಡೆಯದೆ ಪೌತಿಖಾತೆ ವರ್ಗಾವಣೆ ಮಾಡಿ ಜೊತೆಗೆ ತುಂಡು ಜಾಗವನ್ನೂ ಸಹ ಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿದೆ.

ಈ ಅಕ್ರಮದ ಬಗ್ಗೆ ಆರ್.ಟಿ.ಐ.ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ಅವರು ದಾಖಲೆಗಳನ್ನ ಪಡೆದು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿ ದೂರು ನೀಡಿದ್ದರು.

ಈ ಸಂಬಂಧ ಪರಿಶೀಲನೆ ನಡೆಸಿದಾಗ ಮುಡಾದ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮಸುಂದ್ರು ಅವರ ಕೈವಾಡ ಇರುವುದು ಬೆಳಕಿಗೆ ಬಂದಿದೆ.

ಮುಡಾದಲ್ಲಿ ಯಾವುದೇ ಕ್ರಯಪತ್ರ ನೀಡುವ ಹಾಗೂ ಅನುಮೋದಿಸುವ ಅಧಿಕಾರ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿ ಆದೇಶವಾಗಿದೆ.ಆದರೆ ಈ ಇಬ್ಬರು ಅಧಿಕಾರಿಗಳು ಕಾರ್ಯದರ್ಶಿಯವರಿಂದ ಅನುಮೋದನೆ ಪಡೆಯಲು ಕಡತಗಳನ್ನು ಮಂಡಿಸದೆ ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ಮಾಡಿ ತಮ್ಮಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಅಕ್ರಮದ ಹಿನ್ನಲೆಯಲ್ಲಿ ಈಗಾಗಲೇ ವ್ಯವಸ್ಥಾಪಕರಾದ ಸೋಮಸುಂದ್ರ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ.

ವಿಶೇಷ ತಹಸೀಲ್ದಾರ್ ವಿರುದ್ದವೂ ಕ್ರಮ ಕೈಗೊಳ್ಳಬೇಕೆಂದು ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಸರ್ಕಾರಕ್ಕೆ ಮಾಡಿದ ಮನವಿಗೆ ಸ್ಪಂದನೆ ದೊರೆತಿದೆ.ಮುಡಾ ಕಾರ್ಯದರ್ಶಿಗಳು ಅಕ್ರಮ ನಡೆದಿರುವುದಾಗಿ ವರದಿಯನ್ನೂ ಸಹ ನೀಡಿದ್ದಾರೆ. ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರ ಆದೇಶದಂತೆ ಎಂಡಿಎ ಆಯುಕ್ತರು ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅವರನ್ನ ಅಮಾನತ್ತಿನಲ್ಲಿ ಇಡುವಂತೆ ಆದೇಶ ಹೊರಡಿಸಿದ್ದಾರೆ.