ಮೈಸೂರು: ಕೌಶಲ್ಯ ತರಬೇತಿಗೆ ಬಂದರೆ ಯುವನಿಧಿ ಭತ್ಯೆ ನಿಲ್ಲಿಸುತ್ತಾರೆ ಎಂಬ ಬಿಜೆಪಿಯವರ ಸುಳ್ಳುಗಳಿಗೆ ಕಿವಿಗೊಡಬೇಡಿ ಎಂದು ಮುಖ್ಯ ಮಂತ್ರಿ ಹೇಳಿದರು.
ಉದ್ಯೋಗ ಸಿಕ್ಕ ಬಳಿಕ ಮಾತ್ರ ಉದ್ಯೋಗ ಪಡೆದವರ ಯುವನಿಧಿ ನಿಲ್ಲಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಮೈಸೂರಿನಲ್ಲಿ ಆಯೋಜಿಸಿದ್ದ ಯುವ ಸಮೃದ್ಧಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಟ್ಟ ಮಾತು ತಪ್ಪಿ ನಡೆಯಲು ನಾನು ಪ್ರಧಾನಿ ಮೋದಿ ಅಲ್ಲ, ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಮಾತು ತಪ್ಪಿದರು. ಈ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು ಸುಳ್ಳು ಹೇಳಿದರು,ನಾವು ಅವರಂತೆ ಸುಳ್ಳು ಹೇಳುವುದಿಲ್ಲ ಎಂದರು.
ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಸರ್ಕಾರ ಬೆಂಗಳೂರಿನಲ್ಲಿ ನಡೆಸಿದ ಉದ್ಯೋಗ ಮೇಳದಿಂದಾಗಿ 58892 ಮಂದಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಅನುಕೂಲ, ಅರಿವು ಪಡೆದುಕೊಂಡಿದ್ದಾರೆ. ಇವರಲ್ಲಿ 11507 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 22819 ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗಳಲ್ಲಿ ನಡೆದ ಉದ್ಯೋಗ ಮೇಳದಲ್ಲಿ 120563 ಅಭ್ಯರ್ಥಿಗಳು ಭಾಗವಹಿಸಿ, 24391 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ, 48232 ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ಪಟ್ಟಿ ನೀಡಿದರು.
ಹಿಂದಿನ ಸರ್ಕಾರ ಉದ್ಯೋಗಾಕಾಂಕ್ಷಿಗಳನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಈ ಎರಡೂವರೆ ವರ್ಷಗಳಲ್ಲಿ ಸರ್ಕಾರದಲ್ಲಿ ಖಾಲಿ ಇದ್ದ 28000 ಉದ್ಯೋಗಗಳನ್ನು ಈಗಾಗಲೇ ಭರ್ತಿ ಮಾಡಿದೆ. 35 ಸಾವಿರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.