ನೃತ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್,ಅಂಬೇಡ್ಕರ್,ಗ್ಯಾರೆಂಟಿ ಯೋಜನೆ

Spread the love

ಮೈಸೂರು: ಕನ್ನಡ, ನಾಡು-ನುಡಿ, ಪರಂಪರೆ , ದೇಶಭಕ್ತಿ, ಜಾನಪದ ಸೊಗಡು, ಸಂಗೀತ, ಸಾಹಿತ್ಯ, ಕಲೆಗಳ ಅನಾವರಣದ ಜೊತೆಗೆ, ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆ, ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಗಳ ನೃತ್ಯ ಪ್ರದರ್ಶನದಲ್ಲಿ ಮೇಳೈಸಿದವು.

ದಸರಾ ಪ್ರಾರಂಭಕ್ಕೂ ಮುನ್ನ ಮೈಸೂರಿಗೆ ಮೊದಲು ಮೆರಗು ತರುವ ದಸರಾ ಯುವ ಸಂಭ್ರಮ ಕಾರ್ಯ ಕ್ರಮ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ವಿವಿಧ ಕಾಲೇಜು ತಂಡಗಳು ಜಾನಪದ ಸೊಗಡು, ಕನ್ನಡ ಪ್ರೇಮ, ದೇಶ ಭಕ್ತಿ,‌ ಪೌರಾಣಿಕ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ನೀಡಿ ಮುದ ನೀಡಿದವು.

ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ ಎಂಬ ಹಾಡಿನ ಸಾಹಿತ್ಯಕ್ಕೆ ನೃತ್ಯ ರೂಪಕ ಮಾಡಿ ಕನ್ನಡದ ಸೊಬಗನ್ನು ಹೆಚ್ಷಿಸಿದರು.

ಕರಾವಳಿ ಭಾಗದ ಯಕ್ಷಗಾನ, ಹುಲಿ ನೃತ್ಯ, ಭರತ ನಾಟ್ಯ ಹೀಗೆ ನಮ್ಮ ನಾಡಿನ ಎಲ್ಲಾ ಶೈಲಿಯ ನೃತ್ಯವನ್ನು ಚಾಮರಾಜನಗರದ ಸುವರ್ಣ ಗಂಗೋತ್ರಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಒಂದೇ ಝಲಕ್ ನಲ್ಲಿ ಪ್ರದರ್ಶಿಸಿದರೆ, ಶಿವ ತಾಂಡವ ನೃತ್ಯ ರೂಪಕ ಶಿವ ಶಿವ ಶಂಕರಕ್ಕೆ ವೀಕ್ಷಕರ ಮನಸೋತರು.

ಚಾಮರಾಜನಗರ ಜಿಲ್ಲೆ ಯಳಂದೂರಿನ ಶ್ರೀ ವೈ ಎಂ. ಮಲ್ಲಿಕಾರ್ಜುನ ಸ್ವಾಮಿ‌ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕರ್ನಾಟಕ ಸರ್ಕಾರದ ಪಂಚ ಗ್ಯಾರೆಂಟಿ ಯೊಜನೆ ಕುರಿತು ನೃತ್ಯ ಮಾಡಿದ್ದು, ನೃತ್ಯದ ಕೊನೆಯಲ್ಲಿ ಬಿಳಿ ಪಂಚೆ, ಬಿಳಿ ಶಲ್ಯ ತೊಟ್ಟು ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಹಾಗೂ ಉಪ ಮುಖ್ಯಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ವೇಷ ತೊಟ್ಟು ಬಂದ ವಿದ್ಯಾರ್ಥಿಗಳು ಭರ್ಜರಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು.

ಮಂಡ್ಯ ಜಿಲ್ಲೆಯ ಸುಂದಹಳ್ಳಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವಿದ್ಯಾರ್ಥಿನಿಯರ ಕರ್ನಾಟಕ‌ ಪೋಲೀಸರ ಸೇವೆ ಕುರಿತ ನೃತ್ಯ ಪ್ರದರ್ಶನಕ್ಕೆ ಬಯಲು ರಂಗಮಂದಿರದಲ್ಲಿ ಕರ್ತವ್ಯದಲ್ಲಿದ್ದ ಎಲ್ಲಾ ಪೊಲೀಸರ ಎದೆಯಲ್ಲಿ ಹೆಮ್ಮೆಯ ಭಾವ ಮೂಡಿತು.

ಮದ್ದೂರಿನ ಹೆಚ್.ಕೆ ವೀರಣ್ಣಗೌಡ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಮಾಯಣ ಕಥಾ ಹಂದರದ ನೃತ್ಯ ಪ್ರದರ್ಶನಕ್ಕೆ ಯುವ ಸಮೂಹ ಜೈ ಶ್ರೀರಾಮ್ ಎಂದು ಕೂಗೂತ್ತಾ ಭಕ್ತಿ‌ಪ್ರದರ್ಶಿಸಿತು.

ಮೈಸೂರಿನ ಆಲನ‌ಹಳ್ಳಿಯ ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜು, ಚಾಮರಾಜನಗರದ ವಿಶ್ವವಿದ್ಯಾನಿಲಯ ಸುವರ್ಣ ಗಂಗೋತ್ರಿ,ನಾಗಮಂಗಲ ದ ಬಿ.ಜಿ.ನಗರ ಎಸ್ ಜೆ ಬಿ ಜಿ ಎಸ್ ಪಾಲಿಟೆಕ್ನಿಕ್‌ ಕಾಲೇಜು, ಮಂಡ್ಯದ ಬಿಲಿಡೆಗಾಲಿನ ಶ್ರೀಭೈರವೇಶ್ವರ ಗ್ರಾಮಾಂತರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ಜಾನಪದ ಸೊಗಡನ್ನು ಬಿತ್ತಿದರು.

ಮೈಸೂರಿನ ಶೀರಾಂಪುರದ ನಿರ್ಮಲ ಕಾಂಪೋಸಿಟ್ ಕಾಲೇಜು,ಬೋಗಾದಿಯ ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಸಂಸ್ಥೆ, ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು, ಕನಕದಾಸ ನಗರದ ಕೌಟಿಲ್ಯ ವಿದ್ಯಾಲಯ ಪ್ರೀ ಯೂನಿವರ್ಸಿಟಿ, ನಾಗಮಂಗಲದ ಪ್ರಾಚಾರ್ಯ ಕಾರ್ಯಾಲಯ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ,ಮಡಕೇರಿಯ ಮಹದೇವ್ ಪೇಟ್ ಶ್ರೀರಾಜೇಶ್ವರಿ ವಿದ್ಯಾಲಯದ ವಿದ್ಯಾರ್ಥಿಗಳು ದೇಶಭಕ್ತಿ ಕುರಿತ ನೃತ್ಯಕ್ಕೆ ಹೆಜ್ಜೆಹಾಕಿದರು.

ನಾಗಮಂಗಲದ ಆದಿಚುಂಚನಗಿರಿ ಯೂನಿವರ್ಸಿಟಿ ಸಾಹಿತ್ಯ ಕಲೆ, ಮೈಸೂರಿನ‌ ಗೋಕುಲಂನ ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರವು ಸುಗ್ಗಿ ಹಾಡಿಗೆ ನೃತ್ಯ ಮಾಡಿದರು. ಜೆ.ಎಸ್.ಎಸ್. ಪಾಲಿಟೆಕ್ನಿಕ್, ಹಾಸನ ಜಿಲ್ಲೆಯ ಅರಕಲಗೂಡಿನ ಏಕತಾರಿ ಸಾಂಸ್ಕೃತಿಕ ಸಂಘಟನೆ,ಹುಣಸೂರಿನ ಬಿಳಿಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೆಜು ವಿದ್ಯಾರ್ಥಿಗಳು ಜಾನಪದ ವೈವಿಧ್ಯತೆಯ ಪರಂಪರೆ ಸಾರಿದರು.

ಬೆಂಗಳೂರಿನ ಮತ್ತಿಕೆರೆ ರಾಯಲ್ ಪಿಯು ಕಾಲೇಜು, ಮೈಸೂರಿನ ದಟ್ಟಗಳ್ಳಿಯ ವಿಶ್ವ ಪ್ರಜ್ಞಾ ಪಿಯು ಕಾಲೇಜು, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜೆ.ಪಿ.ನಗರದ ಜೆ.ಎಸ್.ಎಸ್. ಪದವಿ‌ಪೂರ್ವ ಕಾಲೇಜು, ವಿದ್ಯಾವರ್ಧಕ ಸಂಯುಕ್ತ ಪದವಿ ಪೂರ್ವ ಕಾಲೆಜು, ತುಮಕೂರು ಜಿಲ್ಲೆ ಹುಲಿಯೂರುದುರ್ಗ ಸರ್ಕಾರಿ‌ ಪ.ಪೂ. ಕಾಲೇಜು, ಮಂಡ್ಯ ಜಿಲ್ಲೆ ಮದ್ದೂರಿನ ದಿ ಆರ್.ಕೆ ಕಾಲೇಜು & ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ವೈಭವದ ಬಗ್ಗೆ ನೃತ್ಯ ಪ್ರದರ್ಶಿಸಿದರು.