ಮೈಸೂರು: ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಹಾಗೂ ಗಾಯಕ ಪ್ರೀತಮ್ ಚಕ್ರವರ್ತಿ ಗಾನಸುಧೆಗೆ ಮೈಸೂರು ಜನತೆ ಮನಸೋತು ಕುಣಿದು ಕುಪ್ಪಳಿಸಿದರು.
ನಗರದ ಹೊರವಲಯದ ಉತ್ತನಹಳ್ಳಿ ಬಳಿ ಆಯೋಜಿಸಿರುವ ಯುವ ದಸರಾ ವೇದಿಕೆಯಲ್ಲಿ ಗಾಯಕ ಪ್ರೀತಮ್ ಬರುತ್ತಿದ್ದಂತೆ ಯುವ ಸಮೂಹ ಶಿಳ್ಳೆ ಮೂಲಕ ಸ್ವಾಗತಿಸಿದರು.
ಯುವ ಸಮೂಹದ ಹರ್ಷ ನೋಡಿದ ಗಾಯಕ ಪ್ರೀತಮ್ ಹೇ ದಿಲ್ ಹೇ ಮುಸ್ಕಿಲ, ಥೂ ಮೇರಿ ಸನಮ್, ಥುಮ್ ಜೋ ಆಯೆ, ಅಭಿ ಕುಚ್ ದೇನೆ, ಹಲ್ಕಾ ಹಲ್ಕಾ ಹೇ ಸಮಾ, ಬಿನ್ ತೇರಿ ಸೇರಿದಂತೆ ತಮ್ಮ ಹಲವು ಹಿಂದಿ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಇದಲ್ಲದೆ ಕನ್ನಡದ ಸುದೀಪ್ ನಟನೆಯ ಎಕ್ಕ ಸಕ್ಕ ಎಕ್ಕ ಸಕ್ಕ ಹಾಡು ಹಾಡುತ್ತಿದ್ದಂತೆ ನೆರೆದಿದ್ದವರೆಲ್ಲ ಎದ್ದು ನಿಂತಲ್ಲೇ ಕುಣಿದರು. ಇದಕ್ಕೂ ಮುನ್ನ ಬಾಲಿವುಡ್ ಶೋರ್ ಪೊಲೀಸ್ ಗಾಯಕರ ತಂಡ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತೊಬ್ ತೋಬ, ಊರ್ವಶಿ ಊರ್ವಶಿ ಹಾಗೂ ಇನ್ನಿತರ ಹಿಂದಿ ಗೀತೆಗಳನ್ನು ಹಾಡಿ ಮೋಡಿ ಮಾಡಿದರು.
ಇದೇ ವೇಳೆ ಯುವ ದಸರಾ ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ, ಕೆ. ಜೆ ಜಾರ್ಜ್ ಅವರಿಗೆ ಯುವ ದಸರಾ ಉಪ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಚಿವರಾದ ಭೈರತಿ ಸುರೇಶ್, ಸಂಸದರಾದ ಸುನೀಲ್ ಬೋಸ್, ಪರಿಷತ್ ಸದಸ್ಯರಾದ ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಉಪಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರ ಗಣ್ಯರು ಹಾಜರಿದ್ದರು.