ಮೈಸೂರು: ಅಲಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ವತಿಯಿಂದ ಕರ್ನಾಟಕದ ವರಕವಿ ದ. ರಾ. ಬೇಂದ್ರೆಯವರ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಮೈಸೂರಿನ ಶಿವರಾಂಪೇಟೆ ರಸ್ತೆಯಲ್ಲಿರುವ ಮೈಸೂರಿನ ಸಂಘದ ಕಚೇರಿಯಲ್ಲಿ ದ.ರಾ ಬೇಂದ್ರೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಅವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಸಂಘದ ಅಧ್ಯಕ್ಷ ಎನ್. ಬೆಟ್ಟೇಗೌಡರು ಮಾತನಾಡಿ, ಕರ್ನಾಟಕದ ವರಕವಿ ಎಂದೇ ಪ್ರಸಿದ್ಧರಾದ ಬೇಂದ್ರೆ ಯವರು1973ರಲ್ಲಿ, ತಮ್ಮ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ಪಡೆದುಕೊಂಡಿದ್ದಾರೆ. ಹಾಗೂ ಭಾರತ
ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ಡಾ. ನಾಗರಾಜ್ ಬೈರಿ ಅವರು ಮಾತನಾಡಿ ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದಲೇ ಪರಿಚಿತರಾದ ದಾ.ರಾ ಬೇಂದ್ರೆಯವರು 1896 ಜನವರಿ 31 ರಲ್ಲಿ ಜನಿಸಿ 1981 ಅಕ್ಟೋಬರ್ 26ರಂದು ನಿಧನ ಹೊಂದಿದರು ಎಂದು ಹೇಳಿದರು.
ಸುಮಾರು 85 ವರ್ಷಗಳ ಕಾಲ ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ಕೊಟ್ಟ ಧೀಮಂತ ವ್ಯಕ್ತಿ ದ. ರಾ. ಬೇಂದ್ರೆ ಅವರು ಈ ಯುಗದ ಒಬ್ಬ ಮಹಾಕವಿ. ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು ಎಂದು ಬಣ್ಣಿಸಿದರು.
ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು ಎಂದರು.
ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆ ಗೈದ ಧಾರವಾಡದ ಅಜ್ಜ ಎಂದ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರು ಮಾತನಾಡಿ ರಚನೆ ಬೇಂದ್ರೆಯವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. 1918ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು ತಿಳಿಸಿದರು.
ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. 1921ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು ಎಂದು ಹೇಳಿದರು.
ಸಂಸ್ಕೃತಿ ಚಿಂತಕರಾದ ಡಾ. ರಘುರಾಮ್ ವಾಜ್ಪೇಯಿ ಅವರು ಮಾತನಾಡಿ ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ ಎಂದು ಕೊಂಡಾಡಿದರು.
ಇಂತಹ ಅನೇಕ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾ ಬಂದಿರುವ ಎನ್ ಬೆಟ್ಟೆಗೌಡರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಅಧ್ಯಕ್ಷರು ಬೆಟ್ಟೇಗೌಡ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,
ಪಡುವಾರಹಳ್ಳಿಯ ಎಂ ರಾಮಕೃಷ್ಣ,
ಯುವ ಮುಖಂಡ ಸಂದೀಪ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ರವಿಚಂದ್ರ, ಪಾಂಡು, ಪದ್ಮ ಮತ್ತಿತರರು ಹಾಜರಿದ್ದರು.