ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒತ್ತಿ 29.70 ಲಕ್ಷ ಕಳೆದುಕೊಂಡ ಡಾಕ್ಟರ್!

Spread the love

ಮೈಸೂರು: ಯಾವುದೇ ಮೆಸೇಜ್ ಗಳನ್ನ ನಂಬಿ ಮೋಸ ಹೋಗಬೇಡಿ ಎಂದು ಪದೇ,ಪದೇ ಪೊಲೀಸರು ಮನವಿ ಮಾಡುತ್ತಿದ್ದರೂ ವಿದ್ಯಾವಂತರೇ ಹೀಗೆ ಮೋಸ ಹೋಗುತ್ತಿರುವುದು ನಡೆಯುತ್ತಲೇ ಇದೆ.

ಇದಕ್ಕೊಂದು ಉದಾಹರಣೆ ಮೈಸೂರಿನಲ್ಲಿ ನಡೆದಿದೆ.

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒಂದರ ಮೆಸೇಜ್ ಫಾಲೋ ಮಾಡಿದ ಮೈಸೂರಿನ ವೈದ್ಯರೊಬ್ಬರು 29.71 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಶ್ರೀರಾಂಪುರ ನಿವಾಸಿ ಡಾ.ಪಿ.ಶ್ರೀನಿವಾಸ ಮೂರ್ತಿ ಹಣ ಕಳೆದುಕೊಂಡಿದ್ದು,ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೂಟ್ಯೂಬ್ ವೀಕ್ಷಿಸುತ್ತಿದ್ದ ವೇಳೆ ಲಿಂಕ್ ಒಂದು ಬಂದಿದೆ.ಇದನ್ನ ಓಪನ್ ಮಾಡಿದಾಗ ಇಂಟರ್ ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಇಚ್ಛೆ ಇದೆಯಾ ಎಂದು ಕೇಳಿದ್ದಾರೆ.ಇದಕ್ಕೆ ಡಾ.ಶ್ರೀನಿವಾಸ ಮೂರ್ತಿ ಒಪ್ಪಿ ಅವರು ಹೇಳಿದಂತೆ ಕೆವೈಸಿ ಅಪ್ಡೇಟ್ ಮಾಡಿದ್ದಾರೆ.

ನಂತರ ಇನ್ವೆಸ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ.ಅದಕ್ಕಾಗಿ ವಂಚಕ ಹೇಳಿದ್ದ ಆಪ್ ಒಂದನ್ನ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ನಂತರ IPO ಅಕೌಂಟ್ ಕ್ರಿಯೇಟ್ ಮಾಡಿ ಇನ್ವೆಸ್ಟ್ ಮಾಡುವಂತೆ ಸೂಚಿಸಿ, 26 ಲಕ್ಷ ಮೊತ್ತದ ಟಾಸ್ಕ್ ನೀಡಿ ಕಂಪ್ಲೀಟ್ ಮಾಡುವಂತೆ ತಿಳಿಸಿದ್ದಾರೆ.

ತಮ್ಮ ಬಳಿ ಹಣ ಇಲ್ಲವೆಂದು ತಿಳಿಸಿದಾಗ ಖಾತೆಯಲ್ಲಿ 5 ಲಕ್ಷ ಇದೆ ಅಲ್ಲದೆ ಸಪೋರ್ಟಿಂಗ್ ಫಂಡ್ 10 ಲಕ್ಷ ಕಂಪನಿಯಿಂದ ನೀಡಲಾಗುತ್ತದೆ ಎಂದು ನಂಬಿಸಿದ್ದಾರೆ.ಇದನ್ನ ನಂಬಿದ ಡಾ.ಶ್ರೀನಿವಾಸ ಮೂರ್ತಿ ಹಣ ಹೂಡಲು ಮುಂದಾಗಿದ್ದಾರೆ.

ಈ ವೇಳೆ ಖಾತೆಯಲ್ಲಿ ಲಾಭಾಂಶ ತೋರಿಸಿದೆ.ಹಣ ವಿತ್ ಡ್ರಾ ಮಾಡಲು ಮುಂದಾದಾಗ ಸಪೋರ್ಟಿಂಗ್ ಫಂಡ್ ಹಿಂದಿರುಗಿಸುವಂತೆ ಸೂಚನೆ ನೀಡಿದ್ದಾರೆ.ಅಲ್ಲದೆ 3.06 ಲಕ್ಷ ಟ್ಯಾಕ್ಸ್ ಪೇ ಮಾಡುವಂತೆ ಸೂಚನೆ ನೀಡಿದ್ದಾರೆ.

ವಂಚಕರ ಮಾತು ನಂಬಿ ಶ್ರೀನಿವಾಸ ಮೂರ್ತಿ ಹಂತ ಹಂತವಾಗಿ 29,71.442 ರೂ ಗಳನ್ನ ವರ್ಗಾಯಿಸಿದ್ದಾರೆ.ಆದರೆ ಅತ್ತ ಕಡೆಯಿಂದ ಯಾವುದೇ ಮೆಸೇಜ್ ಬಂದಿಲ್ಲ.

ನಂತರ ತಾವು ಮೋಸ ಹೋಗಿರುವುದು ಗೊತ್ತಾಗಿ ಡಾ.ಶ್ರೀನಿವಾಸ ಮೂರ್ತಿ ಅವರು ತಕ್ಷಣ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.