ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತ:ವದಂತಿಗಳಿಗೆ ಕಿವಿಗೊಡಬೇಡಿ-ಯೋಗಿ

Spread the love

ಪ್ರಯಾಗ್ರಾಜ್: ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ‌ವದಂತಿಗಳಿಗೆ ಕಿವಿಗೊಡಬೇಡಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.

ಈ ಸಂಬಂಧ ಯೋಗಿ ಆದಿತ್ಯನಾಥ್ ಅವರು ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಪಡೆದುಕೊಂಡು ಕೆಲ ಸೂಚನೆಗಳನ್ನು ನೀಡಿದ್ದಾರೆ.

ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಯೋಗಿ ಅವರು, ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.

ಇಂದು ಪ್ರಯಾಗ್‌ರಾಜ್‌ನಲ್ಲಿ ಸುಮಾರು 8 ರಿಂದ 10 ಕೋಟಿ ಭಕ್ತರು ಸೇರಿದ್ದು, ಸಂಗಮದೆಡೆಗೆ ಭಕ್ತರ ಸಂಚಾರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದರಿಂದ ಕಾಲ್ತುಳಿತ ಆಗಿದೆ, ಅಖಾರ ಮಾರ್ಗದಲ್ಲಿ ಬ್ಯಾರಿಕೇಡಿಂಗ್ ದಾಟಲು ಕೆಲವರು ಯತ್ನಿಸಿದಾಗ ಹಲವು ಭಕ್ತರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಕಳೆದ ರಾತ್ರಿಯಿಂದ ಮೌನಿ ಅಮವಾಸ್ಯೆ ಮಹೂರ್ತ ಆರಂಭವಾದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ನಾಗ್ ವಾಸುಕಿ ಮಾರ್ಗ ಮತ್ತು ಸಂಗಮ್ ಮಾರ್ಗದಲ್ಲಿ ಹೆಚ್ಚಿನ ಜನಸಂದಣಿ ಇದೆ. ಜನರು ಯಾವುದೇ ವದಂತಿಗಳಿಗೆ ಗಮನ ಕೊಡಬಾರದು,ಕುಂಭಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಘಾಟ್‌ಗಳನ್ನು ನಿರ್ಮಿಸಲಾಗಿದೆ. ಭಕ್ತರು ಸಂಗಮದ ಬಳಿ ಸಮೀಪದ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಮಾಡಬಹುದು ಎಂದು ಮನವಿ ಮಾಡಿದರು.

ಅಲ್ಲಿಯೂ ಸಂಗಮದ ನೀರು ಬರುತ್ತಿದೆ. ಭಕ್ತರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ. ಭಕ್ತರನ್ನು ಅವರವರ ಸ್ಥಳಗಳಿಗೆ ಹಿಂತಿರುಗಿಸಲು ಪ್ರಯಾಗರಾಜ್ ಪ್ರದೇಶದ ವಿವಿಧ ನಿಲ್ದಾಣಗಳಿಂದ ವಿಶೇಷ ರೈಲುಗಳ ವ್ಯವಸ್ಥೆಗಳಿವೆ ಎಂದು ಹೇಳಿದರು.