ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಸಾಧ್ಯ: ಜಿ.ಟಿ.ದೇವೇಗೌಡ

Spread the love

ಮೈಸೂರು: ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಚಾಮುಂಡಿಬೆಟ್ಟ ಆವರಣದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಯೋಗ ಚಾರಣ ಮತ್ತು ಯೋಗ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಹುಟ್ಟಿದ ಯೋಗವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ವಿಶ್ವ ಮನ್ನಣೆ ಪಡೆದುಕೊಂಡಿದೆ. ಯೋಗ ಮಾಡುವುದರಿಂದ ರಕ್ತ ಪರಿಚಲನ ಸರಿಯಾಗಿ ಮನಸ್ಸು ಮತ್ತು ದೇಹ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ ಎಂದು ಹೇಳಿದರು ‌

ಯೋಗದ ಮೂಲಕ ದ್ಯಾನ ಮತ್ತು ಉಪಾಸನೆ ಮಾಡುವುದರಿಂದ ಮಾನವೀಯ ಮೌಲ್ಯಗಳು, ಶಿಸ್ತು, ಶಾಂತಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಿದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿ.ಟಿ.ಡಿ ತಿಳಿಸಿದರು.

ಯೋಗ ದಸರಾ ಉಪ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಮೈಸೂರಿನ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಯೋಗ ಚಾರಣ ಮತ್ತ ದುರ್ಗಾ ನಮಸ್ಕಾರದಲ್ಲಿ ಬೆಳಗ್ಗೆ 6 ಗಂಟೆಗೆ ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿ, ಚಾಮುಂಡಿ ಬೆಟ್ಟದ ಮೇಲಿನ ಆವರಣ ತಲುಪಿ, ವಜ್ರಾಸನ, ವೀರಾಸನ, ವೀರಭದ್ರ ಆಸನ ಹಾಗೂ ಸಿಂಹ ಘರ್ಜನೆ ಸೇರಿದಂತೆ ಹಲವು ಯೋಗಾ ಆಸನಗಳನ್ನು ಮಾಡುವುದರ ಜೊತೆಗೆ 5 ಸುತ್ತು ದುರ್ಗಾ ನಮಸ್ಕಾರ ಮಾಡಿದರು.

ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗಪಟುಗಳು ಹಾಗೂ ಯೋಗಾಸಕ್ತರು ಸೇರಿದಂತೆ 500ಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಜವರೇಗೌಡ, ಯೋಗ ದಸರಾ ಉಸ ಸಮಿತಿ ಅಧ್ಯಕ್ಷ ಎನ್.ಆರ್.ನಾಗೇಶ್, ಯೋಗ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ರಮ್ಯ ಕೆ, ಶಿಕ್ಷಣಾಧಿಕಾರಿ ನಿರೂಪ್ ವೆಸ್ಲಿ, ಯೋಗ ದಸರಾ ಸಮಿತಿ ಸಹ ಕಾರ್ಯಧ್ಯಕ್ಷರಾದ ಶಿಲ್ಪ ಕೆ, ಜಿಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಸಿ ಹಾಗೂ ಯುವ ದಸರಾ ಉಪ ಸಮಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.