ಮರುಕಳಿಸಿದ ಮರಳು ಮಾಫಿಯಾ:೪ ಕೋಟಿ ಮೌಲ್ಯದ ಮರಳು ಸೀಸ್

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ವಿಶಾಲವಾಗಿ ಹರಿಯುವ ಕೃಷ್ಣಾನದಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಮರಳು ಮಾಫಿಯಾ ಗರಿಗೆದರಿದೆ.

ಕೃಷ್ಣಾನದಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ
ಅನಧಿಕೃತ ಮರಳು ಗಣಿಗಾರಿಕೆ ಅವ್ಯಾಹತವಾಗಿ ಎಗ್ಗಿಲ್ಲದೆ ನಡೆಯುತ್ತಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ವಿವಿದ ಇಲಾಖೆಗಳ ಅಧಿಕಾರಿಗಳ ತಂಡ, ಪೊಲೀಸರು ದಿಢೀರ್ ದಾಳಿ ಮಾಡಿ 4 ಕೋಟಿ ರೂ. ಮೌಲ್ಯದ ಮರಳು ಸೀಸ್ ಮಾಡಿದ್ದಾರೆ.

ತಾಲ್ಲೂಕಿನ ಮುಷ್ಟಳ್ಳಿ, ಚೌಡೇಶ್ವರಿಹಾಳ ಮತ್ತಿತರ ನದಿ ತೀರದ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದ ಮರಳನ್ನು ವಶಪಡಿಸಿಕೊಂಡು, ಆ ಜಮೀನಿನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಜತೆಗೆ 7 ಹಿಟಾಚಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಚಾಲಕ ಹಾಗೂ ಮಾಲಿಕರ ವಿರುದ್ಧ ಸುರಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಲವಾರು ವರ್ಷಗಳಿಂದ ಹಿಂಗಾರು ಸಮಯದಲ್ಲಿ ನೈಸರ್ಗಿಕವಾಗಿ ಅಪಾರ ಪ್ರಮಾಣದ ಮರಳು ಕೃಷ್ಣಾ ನದಿಯ ೨ ದಂಡೆಗಳಲ್ಲಿ ಸಂಗ್ರಹವಾಗಿರುತ್ತದೆ, ಅದನ್ನು ತೆಗೆಯಲು ರಾಜ್ಯ ಸರ್ಕಾರ ಹಲವು ನಿಯಮಗಳನ್ನು ಜಾರಿಗೆ ತಂದರೂ ಸ್ಥಳೀಯ ಶಾಸಕ ಮತ್ತು ಅವರ ಸಹೋದರರು, ಹಿಂಬಾಲಕರು ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಮರಳು ಸಾಗಾಣಿಕೆ ಮಾಡಿ, ಸರ್ಕಾರಕ್ಕೆ ಕೊಟ್ಯಾಂತರ ರೂ. ಹಣ ವಂಚಿಸಿದ್ದಾರೆ.

ಇಂತವರ ಬಗ್ಗೆ ಕ್ರಮ ಯಾವಾಗ ಎಂದು ಜನತೆ ಪ್ರಶ್ನಿಸಿದ್ದಾರೆ.