ಮುದ್ದೇಬಿಹಾಳ: ಕರ್ನಾಟಕದಲ್ಲಿ ಪ್ರತ್ಯೇಕ ಬುಡಕಟ್ಟು ಅಕಾಡೆಮಿ ಸ್ಥಾಪನೆ ಆಗಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಸರ್ಕಾರವನ್ನು ಆಗ್ರಹಿಸಿದರು.
ಮುದ್ದೇಬಿಹಾಳ ಪಟ್ಟಣದ ಅಂಜುಮನ್ ಪದವಿ ಕಾಲೇಜು ಸಭಾಂಗಣದಲ್ಲಿ ಮುದ್ದೇಬಿಹಾಳ ತಾಲೂಕು ಕನ್ನಡ ಜಾನಪದ ಪರಿಷತ್ ಘಟಕ ಏರ್ಪಡಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
12 ಲಕ್ಷಕ್ಕಿಂತ ಹೆಚ್ಚು ಬುಡಕಟ್ಟು ಸಮುದಾಯದವರು ಕರ್ನಾಟಕದಲ್ಲಿದ್ದರೂ ಸಹ ಒಬ್ಬ ಬುಡಕಟ್ಟು ಕಲಾವಿದ ಇದುವರೆಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಆಗದಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಕರ್ನಾಟಕದಲ್ಲಿ ಬುಡಕಟ್ಟು ಅಕಾಡೆಮಿಯನ್ನು ಪ್ರತ್ಯೇಕವಾಗಿ ಸರ್ಕಾರ ಮಾಡಿದ್ದಲ್ಲಿ ಬುಡಕಟ್ಟು ಕಲಾವಿದರಿಗೆ ಬುಡಕಟ್ಟು ಸಮುದಾಯದ ವಿದ್ವಾಂಸರಿಗೆ ಹೆಚ್ಚು ಮನ್ನಣೆ ಹಾಗೂ ಮಾನ್ಯತೆ ಸಿಗುವ ಸಾಧ್ಯತೆಗಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನವಿರುತ್ತದೆ, ಗಿಡಮೂಲಿಕೆಗಳ ಮೂಲಕ ಜನಪದ ಔಷಧಿಯನ್ನು ಪರಿಚಯಿಸಿದ ಕೀರ್ತಿ ಬುಡಕಟ್ಟು ಸಮುದಾಯದವರಿಗೆ ಸೇರುತ್ತದೆ, ಪ್ರಾಣಿ ಪಕ್ಷಿಗಳನ್ನು ಗೌರವಿಸುವ ಸಂಸ್ಕೃತಿಯನ್ನು ನಮಗೆ ಕಳಿಸಿದ್ದೆ ಬುಡಕಟ್ಟು ಸಮುದಾಯದವರು, ಅವರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ನೀಡಲು ಸರ್ಕಾರ ಮುಂದಾಗಬೇಕೆಂದು ಡಾ.ಜನಪದ ಎಸ್.ಬಾಲಾಜಿ ಒತ್ತಾಯಿಸಿದರು
ಸಾಹಿತಿ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ್ ನರಗುಂದ್ ಮಾತನಾಡಿ ಬುಡಕಟ್ಟು ಸಮುದಾಯವರಿಂದ ನೈತಿಕ ಪಾಠ ಕಲಿಯಬೇಕಾಗಿದೆ, ಅವರು ಆಧುನಿಕತೆಯ ಭರಾಟೆ ಇದ್ದರೂ ಸಹ ಇಂದಿಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಎಂ ಪಿ ಎಸ್ ಶಾಲಾ ಮುಖ್ಯ ಗುರುಗಳು ಎಂ ಬಿ ಪಾಟೀಲ್ ಮಾತನಾಡಿ ಬುಡಕಟ್ಟು ಸಮುದಾಯದವರಿಗೆ ಸರ್ಕಾರ ಎಲ್ಲ ಗೌರವ ನೀಡಬೇಕೆಂದು ತಿಳಿಸಿದರು.
ದೇವರ ಹುಳಗಬಾಳ ಗ್ರಾಮದ ಸೋಬಾನ ಕಲಾವಿದರು ಸೋಬಾನೆ ಪದಗಳ ಕಾರ್ಯಕ್ರಮ ನೀಡಿದರು.
ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎ ಆರ್ ಮುಲ್ಲಾ, ಖಜಾಂಜಿ ಎಸ್ ವೈ ವಗ್ಗರ್,ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಪುಂಡಲಿಕ ಯು ಮುರಳ್, ನಿವೃತ್ತ ಕಂಟ್ರೋಲರ್ ಕೆ ಬಿ ಬ್ಯಾಟಿ, ಅಂಜುಮನ್ ಕಾಲೇಜಿನ ನಾಯ್ಕೋಡಿ, ಸಹಾಯಕ ಪ್ರಾಧ್ಯಾಪಕ ಗಿರೀಶ್, ತಾಳಿಕೋಟಿ ತಾಲೂಕಿನ ಅಧ್ಯಕ್ಷ ಸಿದ್ದನಗೌಡ ಕಾಶಿನಕುಂಟೆ, ಜಾನಪದ ಯುವ ಬ್ರಿಗೇಡ್ ಬಿಜಾಪುರ ಜಿಲ್ಲಾ ಸಹ ಸಂಚಾಲಕ ಅಯಾಜ್ ಅಹಮದ್ ನಗರದಿನ್ನಿ ಮತ್ತಿತರರು ಉಪಸ್ಥಿತರಿದ್ದರು.