ಹೆಚ್.ಡಿ.ಕೋಟೆ: ಬಡತನ ನಿರ್ಮೂಲನೆ ಆಗಲೇಬೇಕು ನಾಡಿನ ಪ್ರತಿಯೊಬ್ಬರಿಗೂ ಸೂರು ಸಿಗಬೇಕು ಎಂದು ಸರ್ಕಾರಗಳು ಮತ್ತು ರಾಜಕಾರಣಿಗಳು ಭಾಷಣದಲ್ಲಿ ಹೇಳುತ್ತಲೇ ಇರುತ್ತಾರೆ, ಆದರೂ ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಸೂರಿಲ್ಲದ ಹಲವಾರು ಕುಟುಂಬಗಳು ಯಾವುದೊ ಚೋಪಡಿಯಲ್ಲಿ ವಾಸ ಮಾಡುತ್ತಿವೆ.
ಇದಕ್ಕೆ ಹೆಗ್ಗಡದೇವನಕೋಟೆಯಲ್ಲಿ ಒಂದು ಸ್ಪಷ್ಟ ಉದಾಹರಣೆ ಇದೆ.
ಎಚ್ ಡಿ ಕೋಟೆ ತಾಲೂಕು ಭೀಮನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆ ಹುಂಡಿ ಗ್ರಾಮದ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ.
ಅದು ಒಂದೆರಡು ವರ್ಷಗಳಿಂದಲ್ಲ ಕಳೆದ 36 ವರ್ಷಗಳಿಂದ ಈಕೆ ಮತ್ತು ಈಕೆಯ ಮನೆಯವರು ರಸ್ತೆಬದಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ!
ಮಳೆ ಬಂದಾಗ ನೀರೆಲ್ಲ ಒಳಗೆ ಬರುತ್ತದೆ, ಬಿಸಿಲಿನ ತಾಪ, ಬಿರುಗಾಳಿಗೆ ಗುಡಿಸಲಿನ ಮೇಲ್ಚಾವಣಿ ಹಾರಿ ಹೋಗುತ್ತದೆ,ಚಳಿ ತಡೆಯಲು ಆಗುವುದಿಲ್ಲ ಆದರೂ ಈ ಗುಡಿಸಲೇ ಅವರಿಗೆ ಅರಮನೆಯಾಗಿದೆ.
ದಿವಂಗತ ರಾಮಯ್ಯ ಅವರ ಪತ್ನಿ ಕಮಲಮ್ಮ ತನ್ನ ಮೊಮ್ಮಗನೊಂದಿಗೆ ಎಲೆಹುಂಡಿ ಗ್ರಾಮದ ರಸ್ತೆ ಬದಿಯಲ್ಲಿ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಬದುಕಲು ಇವರಿಗೆ ಯಾವುದೇ ಕಸಬು ಇಲ್ಲ, ಯಾರೊ ಅವರಿವರು ಕೊಟ್ಟದ್ದನ್ನು ಮೊಮ್ಮಗನಿಗೂ ಕೊಟ್ಟು ಜೀವನ ಸವೆಸುತ್ತಿದ್ದಾರೆ.
ಈಕೆ ಇದೇ ಗ್ರಾಮದವರು ಎಂಬುದಕ್ಕೆ ಎಲ್ಲಾ ಸಾಕ್ಷಿ ಆಧಾರಗಳು ಇವೆ. ಆಧಾರ್ ಕಾರ್ಡ್, ಎಲೆಕ್ಷನ್ ಐಡಿ ಕಾರ್ಡ್,ರೇಷನ್ ಕಾರ್ಡ್ ಇದ್ದಾವೆ. ಪ್ರತಿ ಬಾರಿ ಚುನಾವಣೆಗಳು, ಸ್ಥಳೀಯ ಚುನಾವಣೆಗಳು ಬಂದಾಗ ಈ ಬಾರಿ ಗ್ಯಾರಂಟಿ ಒಂದು ಮನೆಯನ್ನು ಕಟ್ಟಿಕೊಡುವುದಾಗಿ ಜನಪ್ರತಿನಿಧಿಗಳು ಹೇಳುತ್ತಾರೆ ಗೆದ್ದ ನಂತರ ಮಾಮೂಲಿ ಮರೆತೇ ಬಿಡುತ್ತಾರೆ.
ರಸ್ತೆ ಬದಿ ಮಳೆ ಬಿಸಿಲಿನಲ್ಲಿ ಆತಂಕದಲ್ಲಿ ಬದುಕುತ್ತಿರುವ ಕಮಲಮ್ಮನ ಅವಸ್ಥೆಯನ್ನು ಕಂಡು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಅವರು ಆಕೆಯನ್ನು ಭೇಟಿಯಾಗಿ ವಸ್ತುಸ್ಥಿತಿ ಅರಿತು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.
ತಮಗೆ ಒಂದು ಪುಟ್ಟ ಮನೆಯನ್ನು ಕಟ್ಟಿಸಿ ಕೊಡಬೇಕೆಂದು ಎಚ್. ಡಿ ಕೋಟೆ ಶಾಸಕರಿಗೆ ಕಮಲಮ್ಮ ಅವರು ಪತ್ರ ಕೂಡ ಬರೆದಿದ್ದಾರೆ,ಅದೇನಾಯಿತೊ ಇದುವರೆಗೂ ಒಂದು ಮನೆ ಕಟ್ಟಿಕೊಟ್ಟಿಲ್ಲ.

ಈಗಲಾದರೂ ಸ್ಥಳೀಯ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
ಕಮಲಮ್ಮನವರಿಗೆ ಒಂದು ಸೂರನ್ನು ಕಲ್ಪಿಸಿಕೊಟ್ಟು ಚಳಿ ಮಳೆಯಿಂದ ರಕ್ಷಣೆ ಕೊಡಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.