ಮೈಸೂರು: ತನ್ನ 9 ತಿಂಗಳ ಮಗುವಿನ ತಾಯಿಯೊಬ್ಬಳು ಮದ್ಯ ಬೇಕೇಬೇಕೆಂದು ರಂಪಾಟ ಮಾಡಿದ ಘಟನೆ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ತಾಲ್ಲೂಕಿನ ಚಿಕ್ಕೆರೆಯೂರು ಗ್ರಾಮದ ಗಿರಿಜನ ಹಾಡಿಯ ಪಾರ್ವತಿ ತನ್ನ 9 ತಿಂಗಳ ಗಂಡು ಮಗುವನ್ನು ಸಮರ್ಪಕವಾಗಿ ಪೋಷಣೆ ಮಾಡದೆ ಸದಾ ಮದ್ಯ ಸೇವನೆಯಲ್ಲೇ ತೊಡಗಿಕೊಂಡಿದ್ದಾಳೆ.
ತಾಯಿ, ಮಗುವಿನ ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಇಲ್ಲಿನ ಆಶಾ ಕಾರ್ಯಕತೆಯರಾದ ಮಂಜುಳಾ, ವೀಣಾ, ಚಂದ್ರಿಕಾ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿಚಾರ ತಿಳಿಸಿದಾಗ, ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥರಾದ ಜಶೀಲ ಅವರು ತಾಯಿ ಮತ್ತು ಮಗುವನ್ನು ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಂತೆ ಸೂಚಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಮುಖಾಂತರ ತಾಯಿ ಮತ್ತು ಮಗುವನ್ನು ತಪಾಸಣೆ ಮಾಡಿಸಲು ಮುಂದಾದಾಗ ಪಾರ್ವತಿ ಮದ್ಯದ ಚಟದಿಂದ ಸ್ತಿಮಿತ ಕಳೆದುಕೊಂಡು ಮದ್ಯಕ್ಕಾಗಿ ಗಲಾಟೆ ಮಾಡಿದ್ದಾಳೆ.
ಆದರೆ ಮಗುವಿನ ಮೇಲೆ ತಾಯಿ ಯಾವುದೇ ರೀತಿಯ ತೊಂದರೆಗಳು ಮತ್ತು ಹಲ್ಲೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಮದ್ಯ ಸೇವನೆ ಚಟದಿಂದ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದರು.
ನಂತರ ಆಶಾ ಕಾರ್ಯಕರ್ತರು, ವೈದ್ಯರು, ಮಹಿಳಾ ಸಾಂತ್ವನ ಕೇಂದ್ರದವರು, ಸಿಡಿಪಿ ಇಲಾಖೆಯವರು ತಾಯಿ ಪಾರ್ವತಿಗೆ ಮದ್ಯದ ಚಟದ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಲು ಮುಂದಾದರು.
ಪಾರ್ವತಿ ಮಾತ್ರ ಇದಕ್ಕೆ ಕ್ಯಾರೇ ಅಂದಿಲ್ಲ, ನಾನು ಕುಡಿತ ಬಿಡುವ ಪ್ರಶ್ನೆಯೇ ಇಲ್ಲ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನನಗೆ 90 ಬೇಕೇ ಬೇಕು ಎಂದು ಪಟ್ಟುಹಿಡಿದಿದ್ದಾಳೆ.
ಕೊನೆಗೆ ಎಲ್ಲರೂ ಸೇರಿ ಆಕೆಯನ್ನು ಸಮಾಧಾನಪಡಿಸಿ ಊರಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.
ಪಾರ್ವತಿ ಮತ್ತು ಆಕೆಯ ಮಗು ಹಾಡಿಯಲ್ಲಿ ವಾಸಿಸುತ್ತಿರಲಿಲ್ಲ. ಆಕೆ ಕಳೆದ ಒಂದು ವರ್ಷದಿಂದ ಗಂಡ ಶಿವು ಜೊತೆ ಗಲಾಟೆ ಮಾಡಿಕೊಂಡು ಬೊಮ್ಮಲಾಪುರ ಹಾಡಿಯ ಪತಿಯ ಮನೆಯಿಂದ ಹೊರಬಂದು ತವರು ಮನೆ ಇರುವ ಚಿಕ್ಕ ಕೆರೆಯೂರಿನಲ್ಲಿ ವಾಸವಾಗಿದ್ದರು.
ಆದರೆ ಈಗ ಅಲ್ಲೂ ಹೋಗದೆ ಪತಿಯ ಮನೆಗೂ ಹೋಗದೆ ಕುಡಿತದ ಮತ್ತಿನಲ್ಲಿ ನಾಪತ್ತೆಯಾಗಿದ್ದಾಳೆ.ಆಕೆಯ ಕಥೆ ಮುಂದೇನೊ ಆ ದೇವರೇ ಬಲ್ಲಾ.