ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಅಪರಾಧ ಕೃತ್ಯಗಳ ಪ್ರಮಾಣ ದಿನೇ ದಿನೇ ಹೆಚ್ಚಾಗಿದ್ದು,ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಇವುಗಳನ್ನು ತಡೆಗಟ್ಟಲು ವಿಶೇಷ ಚರ್ಚೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಈ ಬಗ್ಗೆ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಲಕ್ಷ್ಮಿಕಾಂತ ರಾವ್ ಮಾತನಾಡಿ ಪ್ರತಿ ದಿವಸ 10 ಪೋಕ್ಸೋ ಕೇಸುಗಳು ದಾಖಲಾಗುತ್ತಿದ್ದರೆ , ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ರಾಜ್ಯದಾದ್ಯಂತ ಸೈಬರ್ ಅಪರಾಧ ಕೃತ್ಯಗಳು ಕೂಡಾ ಏಗ್ಗಿಲ್ಲದೆ ನಡೆಯುತ್ತಿದ್ದು ಜನಸಾಮಾನ್ಯನ ದುಡಿಮೆಯ ಹಣ ಕಳ್ಳರ ಪಾಲಾಗುತ್ತಿದೆ. ಕೊರಿಯರ್ ಮತ್ತು ಆನ್ ಲೈನ್ ಬಂಡವಾಡ ಹೂಡಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಸಂಘಟಿತ ಅಪರಾಧಗಳು ದಿನೇ ದಿನೇ ಮುಗಿಲು ಮುಟ್ಟುತ್ತಿದೆ. ಜನಸಾಮಾನ್ಯನ ಹಣವನ್ನು ಮರಳಿ ಪಡೆದುಕೊಳ್ಳಲು ಪೊಲೀಸ್ ಇಲಾಖೆಯಿಂದ ಎಳ್ಳಷ್ಟು ಅನುಕೂಲಗಳು ಸಿಗುತ್ತಿಲ್ಲ. ಸಾಕಷ್ಟು ಪ್ರಭಾವ ಹಾಗೂ ಹಣ ಬಲವಿಲ್ಲದೆ ಯಾವುದೇ ಆರೋಪಿಗಳ ಮೇಲೆ ಎಫ್ಐಆರ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನೇಕ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಂತಹ ಪೊಲೀಸರ ಮೇಲೆ ಯಾವುದೇ ಕ್ರಿಮಿನಲ್ ಮುಖದ್ದಮೆಯನ್ನು ದಾಖಲಿಸದೆ ಕೇವಲ ಇಲಾಖಾ ತನಿಖೆಗೆ ಶಿಫಾರಸು ಮಾಡುತ್ತಿರುವುದರಿಂದ ಪೊಲೀಸ್ ಸಿಬ್ಬಂದಿ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಪ್ರತಿಯೊಂದು ದೂರಿನಲ್ಲೂ ರಾಜಕಾರಣಿಗಳ ಹಾಗೂ ಅವರ ಬಂಟರುಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ನಗರದಾದ್ಯಂತ ಕೋಟಿಗಟ್ಟಲೆ ಹಣ ಸುರಿದು ವರ್ಗಾವಣೆ ಮಾಡಿಸಿಕೊಂಡು ಬಂದ ಅಧಿಕಾರಿಗಳಿಂದ ಯಾವುದೇ ಅಪರಾಧ ಕೃತ್ಯಗಳು ಹಾಗೂ ಶಿಕ್ಷೆಗಳು ತಕ್ಕ ಪ್ರಮಾಣದಲ್ಲಿ ಆಗದೆ ಪ್ರತಿಯೊಂದು ಪೊಲೀಸ್ ಠಾಣೆಗಳು ಸಹ ಪ್ರತಿ ದಿವಸ ಲಕ್ಷಾಂತರ ರೂಪಾಯಿಗಳನ್ನು ದುಡಿಯುವ ಎಟಿಎಂ ಗಳಾಗಿ ಪರಿವರ್ತನೆ ಆಗುತ್ತಿದೆ ಎಂದು ಕಿಡಿಕಾರಿದರು.
ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ರಸ್ತೆಯಲ್ಲಿ ಕಾಣಿಸಿಕೊಳ್ಳದೆ ತಮ್ಮ ವೃತ್ತಿಪರತೆಯಲ್ಲಿ ವಿಫಲರಾಗಿರುವ ಕಾರಣದಿಂದ ಅತಿಯಾದ ಸಂಚಾರ ಸಮಸ್ಯೆ ಎದುರಾಗುತ್ತಿದೆ.
ಹಗಲಲ್ಲೇ ಬ್ಯಾಂಕ್ ರಾಬರಿಗಳು, ದೊಂಬಿ ಗಲಾಟೆಗಳು, ಗಣೇಶ ವಿಸರ್ಜನೆ ಹೆಸರಿನಲ್ಲಿ ಮೂಲಭೂತವಾದಿಗಳ ಕೋಮು ಪ್ರಚೋದಿತ ವ್ಯವಸ್ಥಿತ ಶಾಂತಿಭಂಗ ಕೃತ್ಯಗಳು ನಡೆಯುತ್ತಿದ್ದು, ತಹಬದಿಗೆ ತರಲು ಗೃಹ ಇಲಾಖೆ ಸಂಪೂರ್ಣ ವಿಫಲಗೊಂಡಿದ್ದು ಗೃಹ ಸಚಿವರು ಪ್ರತಿಯೊಂದು ಹಂತದಲ್ಲಿಯೂ ವೈಫಲ್ಯತೆಯನ್ನು ಕಾಣುತ್ತಿದ್ದಾರೆ. ಈ ಬಗ್ಗೆ ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು ಎಂದು ಲಕ್ಷ್ಮಿಕಾಂತ ರಾವ್ ಆಗ್ರಹಿಸಿದರು.
