ಹುಣಸೂರು: ಕಾಡು ಪ್ರಾಣಿಗಳ ಹಾವಳಿ ತಪ್ಪಸಿ ಜನರ ಪ್ರಾಣ ಉಳಿಸಿ, ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮತ್ತು ಅರಣ್ಯದಂಚಿನ ರೈತರನ್ನು ಒಕ್ಕಲೆಬ್ಬಿಸುವುದನ್ನು ಖಂಡಿಸಿ, ಹುಣಸೂರು ಡಿ.ಎಫ್.ಒ. ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳವರು ಬೃಹತ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿ ನಂತರ ಡಿಎಫ್ಒ ಸೀಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾಡಂಚಿನ ರೈತರು, ಜನರು ಆತಂಕದಲ್ಲೇ ಕಳೆಯುವಂತಾಗಿದೆ, ಕಾಡಾನೆ ಮತ್ತು ಹುಲಿ-ಚಿರತೆ ಹಾವಳಿಯಿಂದ ಜನ-ಜಾನುವಾರುಗಳು ಸಾವು ನೋವುಗಳನ್ನು ಅನುಭವಿಸುತ್ತಾ ಕಾಡಂಚಿನ ಪ್ರದೇಶದಲ್ಲಿ ಬದುಕುವುದೇ ನರಕಯಾತನೆ ಯಾಗಿದೆ ಎಂದು ರೈತ ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದರು.
ಜನರ ಪ್ರಾಣ ಹಾನಿ ಒಂದಾದ ಮೇಲೊಂದು ಆಗುತ್ತಿದ್ದರೂ ಇದನ್ನು ತಡೆಗಟ್ಟಲು ಅರಣ್ಯ ಇಲಾಖೆ ಈ ಬಗ್ಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ,ಕಾಡುಪ್ರಾಣಿಗಳ ತಡೆಗೆ ಗಂಭೀರವಾಗಿ ಪ್ರಯತ್ನ ಮಾಡಲೇ ಇಲ್ಲ ಎಂದು ಕಿಡಿಕಾರಿದರು.
ಕಾಡಾನೆ ಹಾವಳಿಯನ್ನು ತಪ್ಪಿಸಲು ಕಾಡಂಚಿನ ಪ್ರದೇಶದಲ್ಲಿ ರೈಲು ಕಂಬಿಯನ್ನು ಆಳವಡಿಕೆ ಕಾಮಗಾರಿಯನ್ನು ಪೂಣಗೊಳಿಸಬೇಕು,
ಹುಲಿ-ಚಿರತೆ ಹಾವಳಿಯನ್ನು ನಿಯಂತ್ರಿಸಲು ಪರಿಣಿತರು ಹಾಗೂ ಹಿರಿಯ ಅಧಿಕಾರಿಗಳೊಳಗೊಂಡ ತಂಡವನ್ನು ರಚಿಸಬೇಕು,ಕಾಡಾನೆ ಮತ್ತು ಹುಲಿ ಹಾವಳಿಯಿಂದ ಪ್ರಾಣ ಹಾನಿಯಾದಲ್ಲಿ 25 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಖಾಯಂ ಸರ್ಕಾರಿ ಉದ್ಯೋಗ ದೊರಕಿಸಬೇಕು, ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರವೇ ಪೂರ್ಣವಾಗಿ ಭರಿಸಬೇಕು, ಕಾಡಾನೆ ಹಾವಳಿಯಿಂದ ಫಸಲು ನಷ್ಟವಾದಲ್ಲಿ ವೈಜ್ಞಾನಿಕ ಪರಿಹಾರ ನೀಡಬೇಕು,ಹಂದಿ ಮತ್ತು ಕೋತಿಗಳಿಂದಲೂ ಫಸಲು ನಷ್ಟವಾಗುತ್ತಿದ್ದು,ಅದನ್ನು ನಿಯಂತ್ರಿಸಬೇಕು,
ಕಾಡಂಚಿನ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಪ್ರತಿಭಟನಾ ನಿರತರು ಸರ್ಕಾರವನ್ನು ಆಗ್ರಹಿಸಿದರು.

ರೈತನಾಯಕ ಹಾಗೂ ಮೇಲುಕೋಟೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ,
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್,ಹುಣಸೂರು ತಾಲೂಕು ಅಧ್ಯಕ್ಷ ಚಿಕ್ಕಣ್ಣ ಬೆಂಕಿಪುರ,
ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಹಾಗೂ ದಲಿತ ಸಂಘಟನೆ ಸದಸ್ಯರು, ರೈತರು, ಅರಣ್ಯದಂಚಿನ ಗ್ರಾಮವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.