ಮೈಸೂರು: ಪತ್ನಿಯ ವರ್ತನೆಯಿಂದ ಬೇಸತ್ತಿದ್ದ ಪತಿ ಆಕೆಯನ್ನು ಹತ್ಯೆ ಮಾಡಲು ಯುವಕರಿಬ್ಬರಿಗೆ ಸುಫಾರಿ ನೀಡಿದ್ದ ಹೇಯ ಘಟನೆ ಮೈಸೂರಿನಲ್ಲಿ ನಡೆದಿದ್ದು ಪತಿ ಪೊಲೀಸರ ಅತಿಥಿಯಾಗಿದ್ದಾನೆ.
ಯುವಕರಿಂದ ಹಲ್ಲೆಗೊಳಗಾಗಿದ್ದ ಮಹಿಳೆ ನಾಗರತ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಎಂಶ್ರೀ ನಗರದ ನಿವಾಸಿ ಮಹೇಶ್ ಎಂಬವರ ಮನೆಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ನಾಗರತ್ನ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕೊಠಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ಘಟನೆ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿ ಕಾದಿತ್ತು. ಪತಿಯೇ ಪತ್ನಿ ಕೊಲೆಗೆ ಸುಫಾರಿ ನೀಡಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ತಕ್ಷಣ ಪೊಲೀಸರು ನಾಗರತ್ನ ಅವರ ಪತಿ ಮಹೇಶ್‌ನನ್ನು ವಶಕ್ಕೆ ಪಡೆದಿದ್ದು, ಸುಫಾರಿ ಪಡೆದಿದ್ದ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ.
ಪಾನೀಪುರಿ ವ್ಯಾಪಾರಿ ಮಹೇಶ್ ಹಾಗೂ ನಾಗರತ್ನ ಅವರಿಗೆ 18 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಮಕ್ಕಳಿರಲಿಲ್ಲ. ಹಣಕಾಸು ವ್ಯವಹಾರ ಮಾಡಿಕೊಂಡಿದ್ದ ನಾಗರತ್ನ ಪತಿಯನ್ನು ಕೀಳಾಗಿ ನೋಡುತ್ತಿದ್ದರಂತೆ.
ಸಾರ್ವಜನಿಕವಾಗಿ ನಿಂದಿಸುತ್ತಿದ್ದುದಲ್ಲದೆ, ನಿನ್ನ ಕೈಲಿ ಏನೂ ಆಗುವುದಿಲ್ಲ ಎಂದು ನೆಂಟರಿಷ್ಟರ ಸಮ್ಮುಖದಲ್ಲಿಯೇ ಮೂದಲಿಸುತ್ತಿದ್ದರು ಎನ್ನಲಾಗಿದೆ.
ಇದರಿಂದ ರೋಸಿ ಹೋಗಿದ್ದ ಪತಿ ಮಹೇಶ್ ಪತ್ನಿಯ ಹತ್ಯೆಗೆ ಸಂಚು ರೂಪಿಸಿದ್ದಾನೆ.
ನಂತರ ಪರಿಚಿತರ ಮೂಲಕ ಆತನಿಗೆ ಕೊಡಗಿನ ವಿರಾಜಪೇಟೆ ನಿವಾಸಿಗಳಾದ ಭಾಸ್ಕರ್ ಹಾಗೂ ಅಭಿ ಎಂಬವರ ಪರಿಚಯವಾಗಿದೆ.
ಪತ್ನಿಯನ್ನು ಹತ್ಯೆ ಮಾಡುವಂತೆ ಅವರಿಗೆ ಸುಫಾರಿ ನೀಡಿ, ಹತ್ಯೆ ಮಾಡಿದ ನಂತರ ೫ ಲಕ್ಷ ರೂ. ನೀಡುವುದಾಗಿ ಹೇಳಿದ್ದಾನೆ.
ರಾತ್ರಿ ಮಹೇಶ್ ನ ಮನೆಗೆ ಬಂದ ಯುವಕರು ನಾಗರತ್ನ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆ ಇದ್ದ ಕೊಠಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸ್ಥಳೀಯರು ಮಹೇಶ್‌ಗೆ ವಿಚಾರ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಮಹೇಶ್ ಏನೂ ಅರಿಯದವರಂತೆ ನಾಗರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ನಂತರ ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ವಿಚಾರಣೆ ಆರಂಭಿಸಿದ ಪೊಲೀಸರಿಗೆ ಮಹೇಶ್ ವರ್ತನೆ ಅನುಮಾನ ಮೂಡಿಸಿದೆ. ನಂತರ ಅವರು ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿದ ವೇಳೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಪತ್ನಿ ಹತ್ಯೆಗೆ ಸುಪಾರಿ ನೀಡಿದ ಪತಿ!