ಬೆಂಗಳೂರು: ಬಡವರಿಗೆ, ಮಧ್ಯಮ ವರ್ಗದವರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಘಟಕಗಳನ್ನು ಇತ್ತೀಚೆಗೆ ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಜಲ ಮಂಡಳಿಯು ಏಕಾಏಕಿ ನೀರಿನ ದರ ಏರಿಸಿರುವುದಕ್ಕೆ ಆಪ್ ಅಸಮಾಧಾನ ವ್ಯಕ್ತಪಡಿಸಿದೆ.
20 ಲೀಟರ್ ಕುಡಿಯುವ ನೀರಿಗೆ 10 ರೂ. ಗಳಷ್ಟು ಬೆಲೆ ಹೆಚ್ಚಿಸಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಇದು ಬಡವರ ಹಾಗೂ ಜನ ವಿರೋಧಿ ಕೃತ್ಯವೆಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯ ಅವಧಿಯಲ್ಲಿ ಆರ್ ಒ ಘಟಕಗಳ ವಿದ್ಯುತ್ ಬಾಕಿ ಇದ್ದ ಬಿಲ್ಲನ್ನು ಸಹ ಜಲಮಂಡಳಿಯು ಕಟ್ಟುತ್ತಿಲ್ಲ. ಆದರೆ ಕೇವಲ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ರೀತಿಯ ಜಲ ಮಂಡಳಿಯ ಈ ಬೆಲೆ ಏರಿಕೆ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಪ್ರತಿಯೊಬ್ಬ ಪ್ರಜೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸ ಬೇಕಾಗಿರುವುದು ಆಳುವ ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಈಗ ಜಲ ಮಂಡಳಿಯು ಪ್ರಜೆಗಳ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವುದು ಸರಿಯಲ್ಲ ಎಂದು ಹೇಳಿದರು
ಕೂಡಲೇ ಜಿಬಿಎ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಜಲಮಂಡಳಿಯ ಬೆಲೆ ಏರಿಕೆ ಕ್ರಮವನ್ನು ತಡೆಯಬೇಕು. ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಜಲಮಂಡಳಿಯ ವ್ಯಾಪಾರಿ ಬುದ್ಧಿಯನ್ನು ತಪ್ಪಿಸಬೇಕು ಎಂದು ಡಾ. ಸತೀಶ್ ಕುಮಾರ್ ಅಗ್ರಹಿಸಿದರು.