ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳದ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ
ಬೆಂಗಳೂರು ನಗರ ಅಭಿವೃದ್ಧಿ ಸಚಿವ
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಎಎಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕೊಳಗೇರಿ ನಿವಾಸಿಗಳಿಗೆ ಉಚಿತ ನೀರು ಪೂರೈಸಲು ಆಗದೆ ಅವರುಗಳ ಸ್ವಾಭಿಮಾನಕ್ಕೆ ಅಪಮಾನ ತರುವಂತ ರೀತಿಯ ಹೇಳಿಕೆಯನ್ನು ನೀಡಿರುವುದಲ್ಲದೆ ನೀರಿನ ದರ ಹೆಚ್ಚಿಸುವುದಾಗಿ ತಿಳಿಸಿರುವ ಡಿ.ಕೆ ಶಿವಕುಮಾರ್ ಅವರ ನಿಲುವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಹಾಗೂ ಯಾವುದೇ ಕಾರಣಕ್ಕೂ ನೀರಿನ ದರವನ್ನು ಹೆಚ್ಚಿಸಲು ಬಿಡುವುದಿಲ್ಲ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಎಚ್ಚರಿಸಿದರು.
ಕಾವೇರಿ ನೀರಿನ ಪೈಪ್ ಲೈನ್ ಗಳಲ್ಲಿ ಈಗಲೂ ಶೇ.35ರಷ್ಟು ಸೋರಿಕೆಯಾಗುತ್ತಿದೆ ಎಂದು ಜಲಮಂಡಳಿಯೇ ತನ್ನ ವರದಿಯಲ್ಲಿ ತಿಳಿಸಿದೆ. ಹೀಗಿರುವಾಗ ದುರಸ್ತಿ ಕಾರ್ಯಗಳಿಗೆ ಪ್ರತಿವರ್ಷ ಮಂಡಳಿಯು ಖರ್ಚು ಮಾಡುತ್ತಿರುವ ಸಾವಿರಾರು ಕೋಟಿ ಜನತೆಯ ತೆರಿಗೆ ಹಣ ಯಾರ ಜೇಬಿಗೆ ಸೇರುತ್ತಿದೆ ಎಂದು ಅವರು ಪ್ರಶ್ನಿಸಿದರು.
ಎಲ್ ಅಂಡ್ ಟಿ ಕಂಪನಿ ಜಲ ಮಂಡಳಿಯ ಕಾಮಗಾರಿಯನ್ನು ತೆಗೆದುಕೊಳ್ಳದಿರುವ ಕಾರಣ ಏನು ಎಂಬುದನ್ನು ಡಿ.ಕೆ. ಶಿವಕುಮಾರ್ ತಿಳಿಸಬೇಕು ಎಂದು ಜಗದೀಶ್ ಆಗ್ರಹಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿನಾದ್ಯಂತ 10,000 ಕೋಟಿ ರೂ ಖರ್ಚು ಮಾಡಿ ಹೊಸ ಪೈಪುಗಳನ್ನು ಅಳವಡಿಸಿದ ಕಾಮಗಾರಿಗಳಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆಗಿದೆ ಎಂದು ಗೊತ್ತಿದ್ದರೂ 40 % ಕಮಿಷನ್ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಡಿ.ಕೆ. ಶಿವಕುಮಾರ್ ಎಕೆ ಇನ್ನೂ ತನಿಖೆಗೆ ಆದೇಶ ನೀಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರು ಜಲ ಮಂಡಳಿಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಪ್ರತಿ ವರ್ಷ ನಡೆಯುವ ಸಾವಿರಾರು ಕೋಟಿ ಭ್ರಷ್ಟಾಚಾರ ಮುಂದುವರಿಸಿ,ನೀರಿನ ಸೋರಿಕೆ ತಡೆಗಟ್ಟದೆ ಇರುವುದು ಹಾಗೂ ಅಕ್ರಮ ಸಂಪರ್ಕಗಳಿಗೆ ಕಡಿವಾಣ ಹಾಕದೆ ಕೇವಲ ತಮ್ಮ ಆಮದನಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ಬೆಂಗಳೂರು ನಿವಾಸಿಗಳು ದರ ಏರಿಕೆಯಿಂದಾಗಿ ತತ್ತರಿಸುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಆಮ್ ಆದ್ಮಿ ಪಕ್ಷ ಈ ಬಗ್ಗೆ ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಜಗದೀಶ್ ವಿ.ಸದಂ ಕಠಿಣ ಎಚ್ವರಿಕೆ ನೀಡಿದರು.