ಮೈಸೂರು: ವಕ್ಫ್ ಮಂಡಳಿ ಬಡ ಜನರ ಭೂಮಿ ಕಬಳಿಸುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಇದಕ್ಕೆಲ್ಲ ಸರ್ಕಾರವೇ ನೇರ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಸಿದರು.
ಮೈಸೂರಿನಲ್ಲಿ ವಕ್ಫ್ ಮಂಡಳಿಯಿಂದ ನೋಟಿಸ್ ನೀಡಲಾದ ಸ್ಥಳಗಳಿಗೆ ಭೇಟಿ ನೀಡಿದ ಆರ್.ಅಶೋಕ ಅವರು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ವಕ್ಫ್ ಮಂಡಳಿ ಮೈಸೂರಿನಲ್ಲಿ ಅನೇಕರಿಗೆ ನೋಟಿಸ್ ನೀಡಿದೆ. ಭೂಮಿಯನ್ನು ಕಬಳಿಸುವುದರ ಜೊತೆಗೆ, ಈ ಜಾಗವನ್ನು ಲೀಸ್‌ಗೆ ಪಡೆಯಿರಿ ಎಂದು ವಕ್ಫ್ ಮಂಡಳಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲವು ಕಡೆ ಬಡಜನರ ಭೂಮಿಗೆ ಬೇಲಿ ಹಾಕಿಕೊಂಡಿದ್ದಾರೆ. ಮುಸಲ್ಮಾನರೇ ಇಲ್ಲದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಮುನೇಶ್ವರ ನಗರವನ್ನು ಸಂಪೂರ್ಣ ವಕ್ಫ್‌ಗೆ ನೀಡಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿ ಮಾಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗಲಿದೆ. ಇದಕ್ಕೆ ಸರ್ಕಾರವೇ ನೇರ ಕಾರಣವಾಗಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಹಿಂದೂಗಳಿಗೆ ಒಂದೇ ಮದುವೆಯಾಗುವಂತೆ ಕಾನೂನು ತರಲಾಯಿತು. ಆದರೆ ಮುಸ್ಲಿಮರಿಗೆ ಈ ಕಾನೂನು ಅನ್ವಯವಾಗಲಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಕ್ಫ್ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡುವಂತೆ ಕಾನೂನು ತಿದ್ದುಪಡಿ ತಂದರು. ಅದಾದ ನಂತರ 1 ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಭೂಮಿ ಒಂದೇ ಬಾರಿಗೆ ವಕ್ಫ್ ಮಂಡಳಿಗೆ ಸೇರಿಬಿಟ್ಟಿತು. ಇವೆಲ್ಲವನ್ನೂ ವ್ಯವಸ್ಥಿತವಾಗಿದೆ ಮಾಡಲಾಗಿದೆ ಎಂದು ಅಶೋಕ್ ಆರೋಪಿಸಿದರು.
ವಕ್ಫ್ ಮಂಡಳಿಯದ್ದು ಸಮಸ್ಯೆಯೇ ಅಲ್ಲವೆಂದರೆ, ರೈತರು ಹಾಗೂ ಮಠಗಳ ಸ್ವಾಮೀಜಿಗಳು ಪ್ರತಿಭಟನೆ ಏಕೆ ಮಾಡುತ್ತಿದ್ದಾರೆ ಬಿಜೆಪಿ ಸಚಿವರು ಎಂದಿಗೂ ಪ್ರತಿ ಜಿಲ್ಲೆಗೆ ಹೋಗಿ ನೋಟಿಸ್ ಕೊಡಲು ಸೂಚನೆ ನೀಡಿರಲಿಲ್ಲ. ಆದರೆ ಈಗಿನ ಸಚಿವ ಜಮೀರ್ ಅಹ್ಮದ್ ಪ್ರತಿ ಜಿಲ್ಲೆಗೆ ಹೋಗಿ ಅಧಿಕಾರಿಗಳನ್ನು ಬೆದರಿಸಿ ನೋಟಿಸ್ ಕೊಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.