ವಕ್ಫ್ ವಿಚಾರದಲ್ಲಿ ಸರ್ಕಾರ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ:ಅಶೋಕ್

Spread the love

ಬೆಂಗಳೂರು: ವಕ್ಫ್ ವಿಚಾರದಲ್ಲಿ ದಿನಕ್ಕೊಂದು ನಾಟಕ, ಕ್ಷಣಕ್ಕೊಂದು ಸುಳ್ಳು ಹೇಳುತ್ತಿರುವ ಸರ್ಕಾರ ಈಗ ಮತ್ತೊಮ್ಮೆ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.
ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನವರೇ,
ವಕ್ಫ್ ವಿಚಾರ ಮೊದಲು ಪ್ರಸ್ತಾಪವಾದಾಗ ಸರ್ಕಾರ ಯಾರಿಗೂ ನೋಟೀಸು ಕಳಿಸುತ್ತಲೇ ಇಲ್ಲ ಎಂದು ಸುಳ್ಳು ಹೇಳಿದಿರಿ.

ನಂತರ ವಿಜಯಪುರ ಜಿಲ್ಲೆಯಲ್ಲಿ ರೈತರು ಸಿಡಿದ್ದೆದ್ದಾಗ, ನೋಟಿಸು ವಾಪಸ್ಸು ಪಡೆದು, ಈ ಪ್ರಕ್ರಿಯೆ ನಿಲ್ಲಿಸುತ್ತೇವೆ ಎಂದು ಮತ್ತೊಂದು ಸುಳ್ಳು ಹೇಳಿದಿರಿ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.

ಆದರೆ ರೈತರಿಗೆ, ಮಠ-ಮಂದಿರಗಳಿಗೆ ಕಳಿಸುವುದು, ರಾತ್ರೋರಾತ್ರಿ ತರಾತುರಿಯಲ್ಲಿ ಭೂದಾಖಲೆಗಳನ್ನು ತಿದ್ದುವುದು ಮಾತ್ರ ನಿಲ್ಲಲೇ ಇಲ್ಲ,ಜತೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇದೆಲ್ಲಾ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಡೆಯುತ್ತಿದೆ ಎಂದು ಹೇಳುವ ವಿಡಿಯೋ ಬಹಿರಂಗ ಆದಮೇಲೆ ತಮ್ಮ ಸುಳ್ಳು ಸಂಪೂರ್ಣ ಬಯಲಾಯಿತು ಸಿದ್ದರಾಮಯ್ಯನವರೆ ಎಂದು ಕಾಲೆಳೆದರು.

ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಮತ್ತೊಂದು ಸುಳ್ಳು ಹೇಳಿದಿರಿ. ಆದರೆ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕೊಡಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24 ರಂದು ತಮಗೆ ಪತ್ರ ಬರೆಯುತ್ತಾರೆ. ತಾವು ಅದೇ ದಿನ ಈ ಪತ್ರವನ್ನ ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ತಾವು ಅನುಮೋದನೆ ನೀಡಿದ್ದೀರಿ.

ಈಗ ವಕ್ಫ್ ವಿಚಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿಹೆಚ್ಚು ನೋಟಿಸುಗಳು ನೀಡಲಾಗಿದೆ ಎಂದು ಮತ್ತೊಂದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ. ಓಲೈಕೆ ರಾಜಕಾರಣಕ್ಕೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ ಸಿದ್ದರಾಮಯ್ಯನವರೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಭಾವಿ ಮುಖಂಡರು ಬಡವರಿಗೆ ಸೇರಿದ ಸಾವಿರಾರು ಎಕರೆ ವಕ್ಫ್ ಭೂಮಿಯನ್ನ ಕಬಳಿಸಿದ್ದಾರೆ ಎಂಬ ವರದಿ ನಮ್ಮ ಸರ್ಕಾರಕ್ಕೆ ಬಂದಿತ್ತು. ಆಗ ಆ ವರದಿಯ ಆಧಾರದ ಮೇಲೆ ತನಿಖೆ ಮಾಡಲು ಸಂಬಂಧಪಟ್ಟವರಿಗೆ ನೋಟಿಸುಗಳನ್ನು ನೀಡಲಾಗಿತ್ತೇ ಹೊರತು ಇದರ ಹಿಂದೆ ಯಾವುದೇ ಕುತಂತ್ರ, ಷಡ್ಯಂತ್ರ ಇರಲಿಲ್ಲ ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗೆ ಮೊದಲು ಹೇಗಾದರೂ ಮಾಡಿ ಜಮೀನು ಕಬಳಿಸಬೇಕು ಎಂಬ ಕಾಂಗ್ರೆಸ್ ಪಕ್ಷದ ಷಡ್ಯಂತ್ರ, ಕುತಂತ್ರ ಬಹುಸಂಖ್ಯಾತ ಹಿಂದೂಗಳಿಗೆ ಬಹಳ ಸ್ಪಷ್ಟವಾಗಿ ಮನವರಿಕೆಯಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಇನ್ನಾದರೂ ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸಿ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಆದಂತೆ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ.