ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ರೆಡಿ: ಸಿಎಂ

Spread the love

ಬೆಳಗಾವಿ: ಸರ್ಕಾರ ಉತ್ತರ ಕರ್ನಾಟಕದ ಚರ್ಚೆಗೂ ಸಿದ್ಧವಿದೆ, ವಕ್ಫ್ ಮಂಡಳಿ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಕುರಿತಂತೆ ಮೌನ ವಹಿಸಲು ಶಾಸಕ ಬಿ.ವೈ. ವಿಜವೇಂದ್ರ ತಮಗೆ 150 ಕೋಟಿಗಳ ಆಮಿಷ ಒಡ್ಡಿದ್ದರು ಎಂಬ ಆರೋಪ ಸುಳ್ಳು ಎಂಬ ಮಾಣಿಪ್ಪಾಡಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರೇ ಸ್ವತಃ ಹಿಂದೆ ಆಮಿಷ ಒಡ್ಡಿದ್ದರು ಎಂದು ಹೇಳಿರುವುದರ ಮೇಲೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಅವರೇ ಪತ್ರಿಕಾಗೋಷ್ಠಿ ಕರೆದು ನೀಡಿರುವ ಹೇಳಿಕೆಗೆ ನನ್ನ ಪ್ರಕಾರ ಪ್ರತಿಕ್ರಿಯೆ ನೀಡಿರುವುದು ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಈಗ ಬಹಳ ವರ್ಷಗಳ ನಂತರ ಹೇಳಿಲ್ಲ ಎನ್ನುತ್ತಿದ್ದಾರೆ. ಏನು ಮಾಡಬೇಕು ಎಂದು ನೀವೇ ಹೇಳಿ ಎಂದು ಸಿದ್ದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಪ್ರಹ್ಲಾದ ಜೋಶಿ ಅವರು ಪಂಚಮಸಾಲಿ ಸಮುದಾಯ ವನ್ನು ಪ್ರವರ್ಗ 2ಎ ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟದಲ್ಲಿ ಆಗಿರುವ ಅವಘಡಕ್ಕಾಗಿ ಸಿಎಂ ಕ್ಷಮೆ ಕೇಳಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರು ಸಮಸ್ಯೆಯನ್ನು ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಲಿ ಎಂದು ಸಿದ್ದರಾಮಯ್ಯ ತಿಳಿಸಿದರು.