ಬೆಂಗಳೂರು: ರಾಜ್ಯದ ವಿವಿಗಳಲ್ಲಿ ಸೂಕ್ತ ನೇಮಕಾತಿ ಮಾಡಿಕೊಳ್ಳದೆ ಉನ್ನತ ಶಿಕ್ಷಣ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.
ರಾಜ್ಯದಲ್ಲಿ 32 ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಈಗಾಗಲೇ ಸ್ಥಾಪಿತವಾಗಿದೆ. ಉನ್ನತ ಶಿಕ್ಷಣಕ್ಕಾಗಿ ಈ ವಿವಿಗಳಲ್ಲಿ ವ್ಯಾಸಂಗಕ್ಕಾಗಿ ಪ್ರವೇಶ ಪಡೆದುಕೊಂಡ ನಮ್ಮ ರಾಜ್ಯದ ಮಕ್ಕಳು ಈಗ ಪರದಾಡುವಂತಹ ಸ್ಥಿತಿಗೆ ತಲುಪಿರುವುದು ನಿಜಕ್ಕೂ ಕಳವಳಕಾರಿಯಾದಂತಹ ಸಂಗತಿ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೇ ಮಂಜೂರಾಗಿರುವ 4,709 ಬೋಧಕ ಹುದ್ದೆಗಳು, 9317 ಬೋದಕೇತರ ಹುದ್ದೆಗಳು ಇವೆ. ಆದರೆ ಇದುವರೆಗೆ ಕೇವಲ 1986 ಬೋಧಕ ಹಾಗೂ 2989 ಬೋಧಕೇತರ ಹುದ್ದೆಗಳು ಮಾತ್ರ ಭರ್ತಿಯಾಗಿದೆ. 9051 ಹುದ್ದೆಗಳನ್ನು ಅನೇಕ ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳದೆ ಇರುವುದು ಸರ್ಕಾರದ ಅಂಕಿ ಅಂಶಗಳೆ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿನ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಣಾರ್ಥಿಗಳ ಪರಿಸ್ಥಿತಿ ತೀರ ಹದೆಗೆಟ್ಟು , ಸರ್ಕಾರಕ್ಕೆ ಹಿಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಘೋಷಿಸಲ್ಪಟ್ಟ 7 ನೂತನ ವಿಶ್ವವಿದ್ಯಾನಿಲಯಗಳಲ್ಲಿಯೂ ಸಹ 467 ಬೋಧಕ ಹುದ್ದೆಗಳು ಹಾಗೂ 1787 ಬೋಧಕೇತರ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದ್ದರೂ ಸಹ ಇದುವರೆವಿಗೂ ಸರ್ಕಾರ ಒಂದೂ ಹುದ್ದೆಯನ್ನು ಭರ್ತಿ ಮಾಡಿಕೊಂಡಿಲ್ಲ, ಇದು ಸರ್ಕಾರದ ನಿರ್ಲಕ್ಷತನಕ್ಕೆ ಹಿಡಿದ ಕನ್ನಡಿಯಾಗಿದೆ.
ರಾಜ್ಯದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆದುಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡುವ ತನ್ನ ಬೌದ್ಧಿಕ ಸಾಮರ್ಥ್ಯದಿಂದ ದೇಶದ ಆಸ್ತಿಯಾಗುವ ಎಲ್ಲ ಅವಕಾಶಗಳನ್ನು ಸರ್ಕಾರವು ಬುಡಮಟ್ಟದಲ್ಲಿಯೇ ಹಿಚುಕಿ ಹಾಕುತ್ತಿರುವುದುಲ ಮುಂದಿನ ಪೀಳಿಗೆಗಳಿಗೆ ಮಾಡುವ ಮಹಾ ದ್ರೋಹ, ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಬಾಕಿ ಇರುವ ನೇಮಕಾತಿಗಳನ್ನು ಮಾಡಬೇಕು ಎಂದು ತಮ್ಮ ಪತ್ರದಲ್ಲಿ ಮುಖ್ಯ ಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.