ಮತ ಕಳವಿನ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಯೋಗ ರಚಿಸಿ ತನಿಖೆ ಮಾಡಿ:ಆಪ್

ಬೆಂಗಳೂರು: ಮತ ಕಳವಿನ ಬಗ್ಗೆ ಕೂಡಲೇ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ಆಯೋಗ ರಚಿಸಿ ತನಿಖೆ ನಡೆಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಮತಕಳವಿನ ಆರೋಪದ ಬಗ್ಗೆ ಚುನಾವಣಾ ಆಯೋಗವು ರಾಷ್ಟ್ರದ ಜನತೆಗೆ ನಿರಾಧಾರ ಎಂದು ನಿರೂಪಿಸುವ ಕ್ರಮಗಳನ್ನು ತೆಗೆದುಕೊಳ್ಳದೆ ರಾಜಕೀಯ ನಾಯಕರುಗಳ ರೀತಿಯಲ್ಲಿ ಪ್ರತ್ಯಾರೋಪವನ್ನು ಮಾಡುತ್ತಿರುವುದು ಅಸಂವಿಧಾನಿಕ ಕ್ರಮ ಎಂದು ಆಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಎಕ್ಸ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.

ಕೂಡಲೇ ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರುಗಳ ಆಯೋಗವನ್ನು ರಚಿಸಿ ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ಅಶೋಕ್ ಮೃತ್ಯುಂಜಯ ಒತ್ತಾಯಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನ್ಯಾಯ ಸಮ್ಮತವಾದ ಚುನಾವಣೆಗಳನ್ನು ನಡೆಸಲಾಗದೆ ಸಂಪೂರ್ಣ ವೈಫಲ್ಯ ಹೊಂದಿರುವ ಕೇಂದ್ರ ಚುನಾವಣಾ ಆಯೋಗವು ತನ್ನ ತಪ್ಪನ್ನು ಮರೆಮಾಚಲು ಈ ರೀತಿ ರಾಜಕೀಯ ಪ್ರೇರಿತ ಸುದ್ದಿಗೋಷ್ಠಿಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಮುಂಬರುವ ದಿನಗಳಲ್ಲಿ ರಾಷ್ಟ್ರದ ಯುವ ಪೀಳಿಗೆ ರಾಷ್ಟ್ರದ ಸಂವಿಧಾನ ಹಾಗೂ ಮತದಾನ ಪ್ರಕ್ರಿಯೆಗಳಲ್ಲಿಯೇ ನಂಬಿಕೆಯನ್ನು ಕಳೆದುಕೊಳ್ಳುವ ಮುಂಚೆ ಎಲ್ಲರೂ ಎಚ್ಚೆತ್ತುಕೊಂಡು ಎಚ್ಚರಿಕೆಯ ನಡೆಯನ್ನು ಪ್ರದರ್ಶಿಸಬೇಕಾಗಿದೆ.

ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲು ಇದೆ. ಈ ರೀತಿಯ ರಾಜಕೀಯ ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅಶೋಕ್ ಮೃತ್ಯುಂಜಯ ಅಭಿಪ್ರಾಯ ಪಟ್ಟಿದ್ದಾರೆ.