ಹುಣಸೂರು: ಹುಣಸೂರು ನಗರಸಭೆಯ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾನಸ ಅವರ ವಿರುದ್ಧ ನಗರಸಭಾ ಸದಸ್ಯರೂ ಹಾಗೂ ಮೈಸೂರು ಜಿಲ್ಲಾ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷರಾದ ವಿವೇಕಾನಂದ ಅವರು ಅರ್ಧ ದಿನ ಏಕಾಂಗಿ ಧರಣಿ ಮಾಡಿದರು.
ನಗರಸಭೆಯ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಹಾರ ಹಾಕಿ ಅನಿರ್ದಿಷ್ಟ ಪ್ರತಿಭಟನೆ ಪ್ರಾರಂಭಿಸಿ ಮಧ್ಯಾಹ್ನ ಮೂರು ಗಂಟೆ ವೇಳೆ ಧರಣಿ ಕೈಬಿಟ್ಟಿದ್ದಾರೆ.
ಹುಣಸೂರು ನಗರಸಭೆಯಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್, ಪೌರ ಆಯುಕ್ತರು ಶ್ರೀಮತಿ ಮಾನಸ ಅವರಿಂದ ಸರ್ವಾಧಿಕಾರಿ ಧೋರಣೆ, ಅಧಿಕಾರಿಗಳಿಗೆ % ನೀತಿ ವಿರೋಧಿಸಿ ನಿರಂತರ ಪ್ರತಿಭಟನೆ ಎಂದು ವಿವೇಕಾನಂದ ಅವರು ಪೋಸ್ಟರ್ ಕೂಡ ಹಾಕಿದ್ದರು.
ಮಾನಸ ಅವರು ಕೆ.ಎಂ.ಎ.ಎಸ್ ಮುಖ್ಯಾಧಿಕಾರಿ ಶ್ರೇಣಿ-2 ಅಧಿಕಾರಿಯಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದೆ ನಗರಸಭೆಗೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಅವರು ಶನಿವಾರ ಬೆಳಿಗ್ಗೆ ಈ ಪ್ರತಿಭಟನೆ ಪ್ರಾರಂಭಿಸಿದ್ದರು.
ಸರ್ಕಾರಿ ಕೆರೆಗೆ ಮತ್ತು ನಗರಸಭೆಯ ಆಸ್ತಿಗಳನ್ನು ರಕ್ಷಣೆ ಮಾಡದೆ, ಅಕ್ರಮವಾಗಿ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಲೈಸೆನ್ಸ್ ಮಂಜೂರು ಮಾಡಿದ್ದಾರೆ ಎಂದು ವಿವೇಕಾನಂದ ಅವರು ಗಂಭೀರ ಆರೋಪ ಮಾಡಿದ್ದರು.