ಶಿವಮೊಗ್ಗ: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯನ್ನು ಮರು ನಿರ್ಮಾಣ ಮಾಡಲು ಕುಮಾರಣ್ಣ ಶಪಥ ಮಾಡಿದ್ದಾರೆ,ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಗುಡ್ಡದ ಮಲ್ಲೇಶ್ವರ ಸಮುದಾಯ ಭವನದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಶೀಘ್ರವೇ ವಿ ಐ ಎಸ್ ಎಲ್ ಕಾರ್ಖಾನೆ ಮರುಸ್ಥಾಪನೆ ಆಗಲಿದೆ ಎಂದು ಹೇಳಿದರು.
ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕುಮಾರಣ್ಣ ಕೇಂದ್ರ ಸಚಿವರಾಗುತ್ತಿದ್ದಂತೆ ವಿಶೇಷ ಕಾಳಜಿ ವಹಿಸಿದ್ದಾರೆ. ನೂರಕ್ಕೆ ನೂರರಷ್ಟು ಇದಕ್ಕೆ ಮರು ಜೀವ ಕೊಡುತ್ತಾರೆ ಎಂದು ತಿಳಿಸಿದರು.
ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಸಂಪೂರ್ಣವಾಗಿ ಮುಚ್ಚೋಗಿತ್ತು. ಅದನ್ನ ಕುಮಾರಣ್ಣ ಅವರ ದೃಢ ನಿರ್ಧಾರದಿಂದ 11,440 ಕೋಟಿ ವೆಚ್ಚದಲ್ಲಿ ಮರು ಜೀವ ನೀಡಿರುವುದು ನಮ್ಮ ಕಣ್ಮುಂದೆ ಇದೆ ಎಂದು ಹೇಳಿದರು.
ಈಗಾಗಲೇ ಇದಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ. ಇಡೀ ಕಾರ್ಖಾನೆಯನ್ನು ಹೊಸದಾಗಿ ಅತ್ಯಾಧುನಿಕವಾಗಿ ಮರು ನಿರ್ಮಾಣ ಮಾಡಬೇಕೆಂದು ಕುಮಾರಣ್ಣ ಅವರು ಶಪಥ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಅತಿ ಶೀಘ್ರದಲ್ಲೇ ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ನಿಖಿಲ್ ಹೇಳಿದರು.
ಜೆಡಿಎಸ್ ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಗಮನಿಸಿದರೆ, ಇದು ಮುಂದಿನ ಚುನಾವಣೆಯ ದಿಕ್ಸೂಚಿ ತೊರಿಸುತ್ತದೆ.ಬದಲಾವಣೆಯ ಗಾಳಿ ತೊರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಂಪರ್ಕ ನಿರಂತರವಾಗಿ ಇಟ್ಟುಕೊಳ್ಳುವ ನಿಮ್ಮ ಬಳಿಗೆ ನಾನು ಬಂದಿದ್ದೇನೆ. ಜನರ ಧ್ವನಿಯಾಗಿರುವ, ಪಕ್ಷ ಕಟ್ಟಲು ಶ್ರಮಿಸುವ ನಿಷ್ಟಾವಂತರನ್ನು ಗುರುತಿಸಿ ಕಾರ್ಯಕರ್ತರ ಸಮಕ್ಷಮ ತಾಪಂ, ಜಿಪಂ ಕ್ಷೇತ್ರಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.