ಮೈಸೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ. ತಮ್ಮ ಬೆಂಬಲಿಗ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರಿಣಾಮ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಕಾಂಗ್ರೆಸ್‌ನಿಂದ ೧೪ ಮಂದಿ ಶಾಸಕರನ್ನು ಕಳುಹಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ಗೆಲ್ಲಿಸುವ ಸಲುವಾಗಿ ಶಿಕಾರಿಪುರದಲ್ಲಿ ಕುರುಬ ಸಮುದಾಯದ ನಾಯಕನಿಗೆ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ಕೂಡ ಸಿದ್ದರಾಮಯ್ಯ ಕಾರಣ. ಪ್ರತಾಪ್‌ಸಿಂಹಗೆ ನೆರವು ನೀಡಿ ನನ್ನ ಸೋಲಿಗೆ ಕಾರಣರಾದರು ಎಂದು ಗಂಭೀರ ಆರೋಪ ಮಾಡಿದರು.
೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರ ಮೇಶ್ವರ್ ಸೋಲಿಗೆ ಕಾರಣ ಯಾರು? ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಲು ಅವರನ್ನೂ ಸೋಲಿಸಿದರು.
ವರುಣ ಕ್ಷೇತ್ರದಲ್ಲಿ ಸ್ಪರ್ದಿಸಿದಾಗ ಸುತ್ತೂರು ಶ್ರೀಗಳ ಕಾಲು ಹಿಡಿದು ಕಾ.ಪು.ಸಿದ್ದಲಿಂಗ ಸ್ವಾಮಿಯನ್ನು ತಣ್ಣಗಾಗಿಸಿದರು. ಚಾಮುಂಡೇಶ್ವರಿ ಬೈ ಎಲೆಕ್ಷನ್‌ನಲ್ಲಿ ಉಡುಪಿ ಮಠದ ಪೀಠಾಧಿಪತಿಗಳ ಕಾಲು ಹಿಡಿದರು. ಸಿದ್ದರಾಮಯ್ಯ ಒಳಗೊಂದು ಹೊರಗೊಂದು ಎಂಬಂತೆ ಡಬಲ್ ಸ್ಟ್ಯಾಂಡ್ ಹೊಂದಿದ್ದಾರೆ ಎಂದು ಎಚ್.ವಿಶ್ವನಾಥ್ ವಾಚಾಮಗೋಚರವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
