ವೈಜಾಗ್ ಸ್ಟೀಲ್ ಕಂಪನಿ ಪುನಚ್ಚೇತನಕ್ಕೆ11,440 ಕೋಟಿ ಪ್ಯಾಕೇಜ್:ಹೆಚ್ ಡಿ ಕೆ

Spread the love

ವಿಶಾಕಪಟ್ಟಣ: ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿದ್ದ ವಿಶಾಖಪಟ್ಟಣದ ವೈಜಾಗ್ ಸ್ಟೀಲ್ ಕಂಪನಿಗೆ ಕೇಂದ್ರ ಸರಕಾರ 11,440 ಕೋಟಿ ಬೃಹತ್ ಪುನಚ್ಚೇತನ ಪ್ಯಾಕೇಜ್ ನೀಡಿದ್ದು, ಕಾರ್ಖಾನೆಯನ್ನು ಸಂಕಷ್ಟದಿಂದ ಪಾರು ಮಾಡಲಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಪ್ಯಾಕೇಜ್ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು; ಕಾರ್ಖಾನೆಯ ಮೂರೂ ಬ್ಲಾಸ್ಟ್ ಪರ್ನೆಸ್ (ಊದು ಕುಲುಮೆ) ಗಳಿಗೆ ಚಾಲನೆ ಕೊಟ್ಟು ಕೆಲವೇ ತಿಂಗಳಲ್ಲಿ ಇಡೀ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಉಕ್ಕು ಉತ್ಪಾದನೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಖಾನೆ 35,000 ಕೋಟಿ ಸಾಲ ಹೊಂದಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಯ ದಕ್ಷತೆ, ಕ್ಷಮತೆಯನ್ನು ಹೆಚ್ಚಿಸುತ್ತೇವೆ. ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ಹೊಂದಿದ್ದೇವೆ. ಸಾಲವನ್ನು ಹಂತಹಂತವಾಗಿ ಮರು ಪಾವತಿ ಮಾಡುತ್ತೇವೆ ಎಂದು ಹೇಳಿದರು.

ವೈಜಾಗ್ ಸ್ಟೀಲ್ ಕಾರ್ಖಾನೆಗೆ ಈ ಪ್ಯಾಕೇಜ್ ನಲ್ಲಿ 10,300 ಕೋಟಿ ಹೂಡಿಕೆ ಮಾಡಲಾಗುವುದು ಹಾಗೂ 1,140 ಕೋಟಿಯನ್ನು ಷೇರು ರೂಪದಲ್ಲಿ ನಿರ್ವಹಣಾ ಬಂಡವಾಳವಾಗಿ ತೊಡಗಿಸಲಾಗುವುದು. ಈ 1,140 ಕೋಟಿಯನ್ನು ಹತ್ತು ವರ್ಷಗಳವರೆಗೂ ಹಿಂದಕ್ಕೆ ಪಡೆಯಲು ಅವಕಾಶವಿಲ್ಲ ಎಂದು ಸಚಿವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶೀಯವಾಗಿ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿಯನ್ನು ನಿಗದಿ ಮಾಡಿದ್ದಾರೆ. ಈ ಗುರಿ ಮುಟ್ಟಬೇಕಾದರೆ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ವೈಜಾಗ್ ಸ್ಟೀಲ್ ಪುನಚ್ಚೆತನ ಯೋಜನೆಯನ್ನು ಇದೇ ಉದ್ದೇಶದಿಂದ ರೂಪಿಸಲಾಗಿದೆ. ದೇಶೀಯ ಉಕ್ಕು ಉದ್ಯಮಕ್ಕೆ ಈ ಕಾರ್ಖಾನೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ವೈಜಾಗ್ ಸ್ಟೀಲ್ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವವೇ ಕಾರಣ ಎಂದು ಹೇಳಿದ ಕುಮಾರಸ್ವಾಮಿ ಅವರು,ನಾನು ಅತ್ಯಂತ ಪ್ರಾಮಾಣಿಕವಾಗಿ ಪ್ರಧಾನಿಗಳಿಗೆ ಆಂಧ್ರ ಪ್ರದೇಶದ ಎಲ್ಲಾ ಅಣ್ಣ ತಮ್ಮಂದಿರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಏಕೆಂದರೆ ಅವರು ಮನಸ್ಸು ಮಾಡದಿದ್ದರೆ ಈ ಪ್ಯಾಕೇಜ್ ಕೊಡಲು ಸಾಧ್ಯ ಆಗುತ್ತಿರಲಿಲ್ಲ ಎಂದು ನುಡಿದರು.

ಇತಿಹಾಸದಲ್ಲಿ ಯಾವುದೇ ಕಾರ್ಖಾನೆ ಅಥವಾ ಕಂಪನಿಯಿಂದ ಬಂಡವಾಳ ವಾಪಸ್ ನಿರ್ಧಾರ ಕೈಗೊಂಡ ಮೇಲೆ ಅದನ್ನು ಮರು ಪರಿಶೀಲಿಸಿದ ಉದಾಹರಣೆ ಇಲ್ಲ. ಆದರೆ, ವೈಜಾಗ್ ಸ್ಟೀಲ್ ವಿಷಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸಂಪುಟದ ನಿರ್ಧಾರ ಕೈಬಿಟ್ಟು ಪುನಶ್ಚೇತನಕ್ಕೆ ಪ್ಯಾಕೇಜ್ ಕೊಡಲಾಗಿದೆ,ಹಾಗಾಗಿ ಯಾರೇ ಆಗಲಿ ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದರು.

ನಾನು ಉಕ್ಕು ಸಚಿವನಾಗಿ ಬಂದ ಮೇಲೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಭೆಗಳನ್ನು ವೈಜಾಗ್ ಸ್ಟೀಲ್ ಗಾಗಿ ನಡೆಸಿದ್ದೇನೆ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಭೂಪತಿರಾಜು ಶ್ರೀನಿವಾಸ ವರ್ಮ ಅವರೊಂದಿಗೆ ಸಭೆ ನಡೆಸಲಾಗಿತ್ತು. ಕಾರ್ಖಾನೆಯ ಬಗ್ಗೆ ಮೋದಿ ಅವರ ಸರಕಾರದ ಬದ್ಧತೆ ಏನು ಎಂಬುದು ಇದರಿಂದ ತಿಳಿಯುತ್ತದೆ. ಇದೇ ವೇಳೆ ನಾನು ಹಣಕಾಸು ಸಚಿವರಿಗೂ ಧನ್ಯವಾದ ಹೇಳುವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಡಿಸಿಎಂ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್ ಸೇರಿ ಅನೇಕ ನಾಯಕರು ಕಾರ್ಖಾನೆ ಪುನಶ್ಚೇತನಕ್ಕೆ ಮನವಿ ಮಾಡಿದ್ದರು. ನನ್ನ ಸಹೋದ್ಯೋಗಿ ಭೂಪತಿರಾಜು ಶ್ರೀನಿವಾಸ ವರ್ಮ ಅವರೊಂದಿಗೆ ನಿರಂತರವಾಗಿ ಕೆಲಸ ಮಾಡಿದ್ದೇನೆ ಎಂದು ನುಡಿದರು.

ಕಾರ್ಖಾನೆಯಲ್ಲಿ ಕಳೆದ ಮೂರು ತಿಂಗಳಿಂದ ಕಾರ್ಮಿಕರು ವೇತನ ಇಲ್ಲದೆ ಕೆಲಸ ಮಾಡುತ್ತಾ ಬಂದಿದ್ದಾರೆ. ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಕಾಣುತ್ತಿದೆ, ಎರಡು ಮೂರು ತಿಂಗಳಲ್ಲಿ ವೇತನ ಪಾವತಿ ವ್ಯವಸ್ಥೆಯನ್ನು ಸರಿ ದಾರಿಗೆ ತರುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಇಲ್ಲಿಗೆ ಬರುವ ಮುನ್ನ ಬೆಳಗ್ಗೆ ತಿರುಪತಿಗೆ ತೆರಳಿ ಬಾಲಾಜಿ ದರ್ಶನ ಪಡೆದು ಬಂದಿದ್ದೇನೆ. ಈ ಕಾರ್ಖಾನೆಯನ್ನು ಉಳಿಸು, ಕಾರ್ಮಿಕರಿಗೆ ಶಕ್ತಿ ಕೊಡು, ಪ್ರಧಾನಿಗಳ ವಿಕಸಿತ ಭಾರತ ಕನಸು ನನಸಾಗಲಿ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆಯ ಸಂಕಲ್ಪ ಈಡೇರಲಿ ಎಂದು ಬೇಡಿಕೊಂಡೆ,ಸ್ವಾಮಿಯ ಅನುಗ್ರಹದಂತೆ ಎಲ್ಲಾ ಆಗುತ್ತಿದೆ ಎಂದು ಹೆಚ್.ಡಿ.ಕೆ ನುಡಿದರು.

ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಆಂಧ್ರ ಪ್ರದೇಶದ ಶಿಕ್ಷಣ ಸಚಿವ ಸತ್ಯಕುಮಾರ್ ಯಾದವ್, ಸಂಸದರಾದ ಭರತ್, ಅಪ್ಪಲನಾಯ್ದು, ಸಿ.ಎಂ.ರಮೇಶ್, ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂದ್ರಿಕ್ ಹಾಗೂ ಸ್ಥಳೀಯ ಶಾಸಕರು ಹಾಜರಿದ್ದರು.