ಮೈಸೂರು: ಆರ್,ಆರ್ ನಂಬರ್ ಪಡೆಯದ ರೈತರ ಕೃಷಿ ಪಂಸೆಟ್ ಗಳ ವಿದ್ಯುತ್ ಕಡಿತಗೊಳಿಸುವಂತೆ ಸರ್ಕಾರ ಆದೇಶಿಸಿರುವುದರಿಂದ ರೈತರಿಗೆ ಬಹಳ ತೊಂದರೆಯಾಗಿದೆ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಮೈಸೂರು ಜಿಲ್ಲಾ ಘಟಕದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಚಾಮರಾಜ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಮೈಸೂರು ಜಿಲ್ಲಾ ಘಟಕದ ಸದಸ್ಯರು ಸರ್ಕಾರಕ್ಕೆ ತಲುಪಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಂಘದ ರಮೇಶ್ ರಾಜು, ಪ್ರಭುಸ್ವಾಮಿ, ರವಿ ಗಂಡತ್ತೂರು, ಶಿವಕುಮಾರ್, ಸಿದ್ದರಾಜು, ಚಂದ್ರೇಗೌಡ, ಕೃಷ್ಣೆಗೌಡ, ನಾಗರಾಜು ಮರಡಿಪುರ ಮತ್ತಿತರರು ಹಾಜರಿದ್ದರು.
ಸರ್ಕಾರ ಈಗಾಗಲೇ ಎಲ್ಲಾ ವಿದ್ಯುತ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಆರ್ ಆರ್ ನಂಬರ್ ಪಡೆಯದೆ ಇರುವ ರೈತರ ಕೃಷಿ ಪಂಸೆಟ್ ಗಳ ವಿದ್ಯುತ್ ಕಡಿತಗೊಳಿಸುವಂತೆ ಆದೇಶಿಸಿದೆ, ಇದರಿಂದ ಈಗಾಗಲೇ ತರಕಾರಿ ಮತ್ತಿತರ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಬಹಳ ತೊಂದರೆಯಾಗುತ್ತದೆ ಎಂದು ಸಂಘದವರು ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಸರ್ಕಾರ ಆರು ತಿಂಗಳ ಕಾಲವಾದರೂ ಈ ಆದೇಶಕ್ಕೆ ತಡೆ ನೀಡಬೇಕು ಮತ್ತು ಈ ಹಿಂದೆ ಇದ್ದ ಮೊತ್ತವನ್ನೇ ರೈತರಿಂದ ಪಡೆಯಬೇಕು ಹೆಚ್ಚುವರಿ ಹಣವನ್ನು ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.