ಮೈಸೂರು,ಏ.6: ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಇಂದು ಮೈಸೂರಿನ ಆರ್ ಗೇಟ್ ವೃತ್ತದ ಬಳಿ ಈಡುಗಾಯಿ ಚಳವಳಿ ಹಮ್ಮಿಕೊಂಡರು.

ಇದೇ ಏ.26 ರಂದು ಅಖಂಡ ಕರ್ನಾಟಕದ ಕನ್ನಡಿಗರ ಸಮಗ್ರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯಾದ್ಯಂತ 2 ಕೋಟಿ ಈಡುಗಾಯಿ ಒಡೆಯುವ ಚಳವಳಿ ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಭಾನುವಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈಡುಗಾಯಿ ಒಡೆಯಲಾಯಿತು.
ಇದೇ ಸಂದರ್ಭದಲ್ಲಿ ಕೆಲವು ಪ್ರಮುಖವಾದ ಸಮಗ್ರ ಬೇಡಿಕೆಗಳನ್ನು ಈಡೇರುಸುವಂತೆ ವಾಟಾಳ್ ಒತ್ತಾಯಿಸಿದರು.

ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು,ಎಂ.ಇ.ಎಸ್. ನಿಷೇಧ ಮಾಡಬೇಕು,ಮೆಟ್ರೋ ದರ ಏರಿಕೆ ಮಾಡಿರುವದನ್ನು ಇಳಿಕೆ ಮಾಡಬೇಕು,
ಪರಭಾಷೆಯವರ ದಬ್ಬಾಳಿಕೆ ನಿಲ್ಲಬೇಕು,
ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡಬೇಕು, ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು,ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು,ಬೆಳಗಾವಿ ಉಳಿಸಬೇಕು,ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ತೊಲಗಬೇಕು ಎಂದು ಆಗ್ರಹಿಸಿದರು.
ಕಳಸಾಬಂಡೂರಿ, ಮಹಾದಾಯಿ ಹಾಗೂ ಮೇಕೆದಾಟು ಯೋಜನೆ ಜಾರಿಗೊಳಿಸಲು ವಾಟಾಳ್ ಒತ್ತಾಯಿಸಿದರು.
ಹಿಂದಿ ಹೇರಿಕೆ ವಿರೋಧ ವ್ಯಕ್ತಪಡಿಸಿದ ಕನ್ನಡ ಪರ ಹೋರಾಟಗಾರರು ಪರಭಾಷಾ ಚಿತ್ರಗಳ ಬಹಿಷ್ಕಾರಕ್ಕೂ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರ ತೇಜೇಶ್ ಲೋಕೇಶ್ ಗೌಡ, ಬಿ ಎ ಶಿವಶಂಕರ್, ಪಾರ್ಥಸಾರಥಿ, ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.