ಹುಣಸೂರು,ಆ.2: ಹುಣಸೂರು ತಾಲೂಕು ಉಮ್ಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿಸುವ ಬಗ್ಗೆ ವಿಚಾರಿಸಲು ಹೋದಾಗ ಪಿಡಿಒ ಅಸಭ್ಯವಾಗಿ ವರ್ತಿಸಿದ್ದಾರೆಂದು ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚಲುವರಾಜು ಆರೋಪಿಸಿದ್ದಾರೆ.

ಆಗಸ್ಟ್ 1 ರಂದು ಉಮ್ಮತ್ತೂರು ಗ್ರಾಮ ಪಂಚಾಯಿತಿಗೆ ಕಾರ್ಯನಿಮಿತ್ತ ಸಂಜೆ 5-34 ರ ಸಮಯದಲ್ಲಿ ಹೋಗಿದ್ದಾಗ ಈ ಪಂಚಾಯಿತಿಯ ಪಿಡಿಒ ಅವರಿಗೆ ನೀವು ಸಾರ್ವಜನಿಕರ ಕೆಲಸವನ್ನು ಮಾಡುತ್ತಿದ್ದೀರಿ, ಇಲ್ಲಿನ ಪಿ.ಡಿ.ಪಿ. ಅವರು ಕೆಲವು ವ್ಯಕ್ತಿಗಳಿಗೆ ಯಾವುದೇ ದಾಖಲೆಗಳು ಇಲ್ಲದಿದ್ದರೂ (ವಂಶವೃಕ್ಷ ಸಹ ಇರುವುದಿಲ್ಲ) ಕಾನೂನು ಬಾಹಿರವಾಗಿ ಹಾಗೂ ಆಕ್ರಮವಾಗಿ ಖಾತೆ ಮಾಡಿದ್ದಾರೆ ಪರಿಶೀಲಿಸಿ ಎಂದು ಮನವಿ ಮಾಡಿದೆ.ಜತೆಗೆ ಅಕ್ರಮವಾಗಿರುವುದು ನಮ್ಮ ಗಮನಕ್ಕೆ ಕಂಡುಬಂದಿದೆ ಎಂದು ತಿಳಿಸಿದೆ,ಆಗ ಪಿ.ಡಿ.ಒ. ಹಾಗೂ ಅವರ ಸಿಬ್ಬಂದಿ ವರ್ಗದವರು ನನಗೆ ಏಕವಚನದಿಂದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಚಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಜತೆಗೆ ನನ್ನನ್ನು ಎಳೆದಾಡಿ ದೈಹಿಕ ಹಲ್ಲೆಗೆ ಯತ್ನಿಸಿ ಕಚೇರಿಯಿಂದ ಹೊರಗೆ ಕಳುಹಿಸಿದ್ದಾರೆ,ಅಲ್ಲದೆ ಯಾರಿಗೆ ದೂರು ನೀಡಿದರೂ ನಾನು ಹೆದರುವುದಿಲ್ಲ ಏನೂ ಮಾಡಲಾಗುವುದಿಲ್ಲ ಎಂದು ಕೇವಲವಾಗಿ ಮಾತನಾಡಿದ್ದಾರೆ ಎಂದು ಚಲುವರಾಜು ದೂರಿದ್ದಾರೆ.
ಈ ಹಿಂದೆ ಸದರಿ ಪಿ.ಡಿ.ಒ ಅವರು ಹೆಗ್ಗಂದೂರು ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಇದೇ ರೀತಿ ವರ್ತಿಸಿದ್ದರೆಂದು ಆರೋಪಿಸಿರುವ ಚಲುವರಾಜು, ಇವರಿಂದಾಗಿ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸಗಳು ಆಗದೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಈಗ ಇರುವ ಪಿ.ಡಿ.ಒ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಿ ಅವರ ವಿರುದ್ಧ ಇಲಾಖಾ ಕಾನೂನು ಕ್ರಮವಹಿಸಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಆಗಲು ಸಹಕರಿಸಬೇಕೆಂದು ಹುಣಸೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.