ಉಗ್ರಾಣ ನಿಗಮದ ಗೋದಾಮುಗಳನ್ನು ಬಳಸಿಕೊಂಡು ರೈತರು ಬೆಳೆ ಸಂರಕ್ಷಿಸಲಿ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ರೈತರು ಭತ್ತ, ರಾಗಿ, ಮುಸುಕಿನ ಜೋಳ, ಉದ್ದು, ಹೆಸರು, ಹುರುಳಿ ಅಲಸಂದೆ ಕಾಳು ಹಾಗೂ ವಾಣಿಜ್ಯ ಬೆಳೆಗಳಾದ ಅರಿಸಿನ, ತೆಂಗು ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ.

ಆದರೆ ಬಹುತೇಕ ರೈತರು ತಾವು ಬೆಳೆದ ಧಾನ್ಯಗಳನ್ನು ಮನೆಯಲ್ಲಿ ದಾಸ್ತಾನು ಮಾಡಲು ಸ್ಥಳಾಭಾವ ಹಾಗೂ ಅನುಕೂಲವಿಲ್ಲದೆ ಜಮೀನುಗಳಲ್ಲೇ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳಿಂದ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆ.

ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಸಿಗುತ್ತಿಲ್ಲ, ಇತ್ತ ಧಾನ್ಯಗಳನ್ನು ಸಂರಕ್ಷಣೆ ಮಾಡಿ ಕೊಳ್ಳಲೂ ಆಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಆದ್ದರಿಂದ ಉಗ್ರಾಣ ನಿಗಮದ ಗೋದಾಮುಗಳನ್ನು ಬಳಸಿ ಕೊಳ್ಳುವ ಮೂಲಕ ರೈತರು ತಾವು ಬೆಳೆದ ಧಾನ್ಯಗಳನ್ನು ಸಂರಕ್ಷಣೆ ಮಾಡಿ ಕೊಳ್ಳಬಹುದಾಗಿದೆ.

ಹೌದು,ಇದು ನಿಜ. ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಉಗ್ರಾಣ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. 1956 ರ ಕೃಷಿ ಉತ್ಪನ್ನ (ಅಭಿವೃದ್ಧಿ ಮತ್ತು ಉಗ್ರಾಣ ವ್ಯವಸ್ಥೆ) ನಿಗಮ ಅಧಿನಿಯಮದ ಪ್ರಕಾರ ಇದನ್ನು ಸ್ಥಾಪಿಸಲಾಗಿದೆ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಪ್ರಕಾರ ಇದು ಕೃಷಿ ಉತ್ಪನ್ನಗಳ ಉಗ್ರಾಣ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ, ರಾಜ್ಯದಲ್ಲಿ ಉಗ್ರಾಣಗಳನ್ನು ನಿರ್ವಹಿಸುತ್ತದೆ, ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತದೆ.

ಈ ನಿಗಮವು ರಾಜ್ಯಾದ್ಯಂತ ಸುಮಾರು 170 ಶಾಖೆಗಳನ್ನು ಹೊಂದಿದ್ದು18 ಲಕ್ಷ ಮೆಟ್ರಿಕ್ ಟನ್ ಧಾನ್ಯ ದಾಸ್ತಾನು ಸಾಮರ್ಥ್ಯ ಇರುವ ಗೋದಾಮುಗಳಿವೆ. ವಿವಿಧ ಜಿಲ್ಲೆಗಳ ಬಹುತೇಕ ರೈತರು ಉಗ್ರಾಣ ನಿಗಮದ ಗೋದಾಮುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಅದೇ ರೀತಿ 1984 ರಲ್ಲಿ ರಾಷ್ಟ್ರೀಯ ಉಗ್ರಾಣ ಜಾಲದ ಯೋಜನೆಯಡಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೊಳ್ಳೇಗಾಲ ಶಾಖೆಯನ್ನು ಪ್ರಾರಂಭಿಸಿದೆ.
ಪಟ್ಟಣದ ಕುರುಬನಕಟ್ಟೆ ರಸ್ತೆಯಲ್ಲಿರುವ ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು 1.25 ಎಕರೆ ವಿಸ್ತೀರ್ಣದಲ್ಲಿದಲ್ಲಿರುವ ಈ ಕೇಂದ್ರವು ಸುಮಾರು 3000 ಮೆಟ್ರಿಕ್ ಟನ್ ದಾಸ್ತಾನು ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ 2000 ಮೆಟ್ರಿಕ್ ಟನ್ ಮತ್ತು 1000 ಮೆಟ್ರಿಕ್ ಟನ್ ಒಟ್ಟು 3000 ಮೆಟ್ರಿಕ್ ಟನ್ ಸಾಮರ್ಥ್ಯವಿರುವ 2 ಗೋದಾಮುಗಳಿದ್ದು ಪ್ರಸ್ತುತ 600 ಟನ್ ಭತ್ತವನ್ನು (16 ಸಾವಿರ ಚೀಲಗಳು) ರೈತರು ದಾಸ್ತಾನು ಮಾಡಿದ್ದಾರೆ.

ಈ ಉಗ್ರಾಣ ಕೇಂದ್ರವನ್ನು ಅಂದಿನ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಮತ್ತು ಉಗ್ರಾಣ ನಿಗಮದ ರಾಜ್ಯ ಸಚಿವರಾದ ಎ.ಎಸ್. ಬಂಡಿಸಿದ್ದೇಗೌಡರು ಉದ್ಘಾಟಿಸಿದ್ದರು. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಶಾಸಕರು ಆದ ಜಿ ಎಫ್ ಉಪನಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂದು ಗೃಹಖಾತೆ ಸಚಿವರಾಗಿದ್ದ ಬಿ. ರಾಚಯ್ಯ ಅವರು ಶಾಸಕರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಬಸವಯ್ಯ ಅವರು ಭಾಗವಹಿಸಿದ್ದರು. ಅಂದಿನಿಂದ ಈ ಕೇಂದ್ರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.

ಇಲ್ಲಿ ರೈತರು ಬೆಳೆದ ಧಾನ್ಯಗಳನ್ನು ದಾಸ್ತಾನು ಮಾಡಲು ಮಾಹೆಯಾನ ಶುಲ್ಕ 70 ಕೆ.ಜಿ.ಯ ಪ್ರತಿ ಚೀಲಕ್ಕೆ ಜಿ.ಎಸ್‌.ಟಿ ಸೇರಿ ಕೇವಲ 6.ರೂ. 30 ಪೈಸೆ ನಿಗದಿ ಪಡಿಸಲಾಗಿದೆ.

ಪ. ಜಾತಿ ಪ.ಪಂಗಡದವರಿಗೆ ಶೇಕಡ 40 ರಷ್ಟು ರಿಯಾಯಿತಿ ನೀಡಲಾಗುವುದು. ಇಲ್ಲಿ ದಾಸ್ತಾನಿಡುವ ಆಹಾರ ಧಾನ್ಯಗಳಿಗೆ ಪ್ರತಿ ತಿಂಗಳು ಎರಡು ಬಾರಿ ಔಷಧಿ ಸಿಂಪಡಣೆ ಮಾಡಲಾಗುವುದು. ಅದು ಸಹ ಧಾನ್ಯಗಳ ವಿಧಗಳ ಮೇಲೆ ಔಷಧಿ ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಧಾನ್ಯಗಳು ಹುಳು ಉಪ್ಪಟಗಳಿಂದ ಹಾಳಾಗುವುದರಿಂದ ಹಾಗೂ ಇಲಿ ಹೆಗ್ಗಣ ದಾಳಿಯಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಲಿದೆ.

ಅಲ್ಲದೆ ರೈತರು ಬೆಳೆದ ಧಾನ್ಯಗಳನ್ನು ದಾಸ್ತಾನು ಮಾಡಿಕೊಂಡು ಬಾಂಡ್ ವಿತರಿಸಲಾಗುತ್ತದೆ. ತುರ್ತು ಹಣಕಾಸು ಸಮಸ್ಯೆ ಉಂಟಾದಾಗ ರೈತರು ಈ ಬಾಂಡ್ ಗಳನ್ನು ಬಳಸಿಕೊಂಡು ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ನಂತರ ಬೆಲೆ ಹೆಚ್ಚಾದಾಗ ಮಾರಾಟ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಇಲ್ಲಿ ರೈತರು ದಾಸ್ತಾನು ಇರಿಸುವ ದವಸ ಧಾನ್ಯಗಳು ಯಾವುದಾದರೂ ಅವಗಡ ಸಂಭವಿಸಿ ನಾಶವಾದರೆ ಎಂಬ ಉದ್ದೇಶದಿಂದ ಮುಂಗಡವಾಗಿ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ ರೈತರು ಇದರ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ. ಎಂದು ಹೇಳುತ್ತಾರೆ ನಿಗಮದ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರಾದ ಎ.ಎಂ. ಸಂಜಯ್ ಕುಮಾರ್ ಅವರು. 

ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ ಅವರು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತ ರಾಗಿದ್ದ ಅವರು ನಿಗಮದ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಉಗ್ರಾಣ ನಿಗಮವನ್ನು ಸಾಕಷ್ಟು ಅಭಿವೃದ್ಧಿ ಪಡಿಸುವ ಆಲೋಚನೆ ಹೊಂದಿದ್ದರು. ಆದರೆ ಅವರು ಕಳೆದ 8 ತಿಂಗಳ (2024 ರ ಡಿ. 10 ರಂದು) ಹಿಂದೆ ಅಕಾಲಿಕ ನಿಧಾನರಾಗಿದ್ದಾರೆ.

ಮುಂದೆ ಯಾರು ಬರುತ್ತಾರೋ‌ ಅವರು ರಾಜ್ಯ ಉಗ್ರಾಣ ನಿಗಮವನ್ನು ಅಭಿವೃದ್ಧಿ ಪಡಿಸಲಿ ರೈತರಿಗೆ ಒಳಿತಾಗಲಿ.