ಬೆಂಗಳೂರು: ಮೈಸೂರಿನ ಉದಯಗಿರಿ ಘಟನೆಯಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಡಕ್ ಸೂಚನೆ ನೀಡಿದ್ದಾರೆ.
ಸಂಜೆ ಮೈಸೂರು ಉದಯಗಿರಿ ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಭೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಕಡಕ್ ಸೂಚನೆಗಳನ್ನು ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಮೈಸೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ತಪ್ಪು ಯಾರೇ ಮಾಡಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ,ಕಾನೂನು ಕೈಗೆ ಎತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿ ಎಂದು ಆದೇಶಿಸಿದ್ದಾರೆ.
ಅಮಾಯಕರಿಗೆ ತೊಂದರೆ ಕೊಡಬಾರದು,
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು,ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಇದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿ ಎಂದು ಸಿದ್ದರಾಮಯ್ಯ ಕಠಿಣ ಸೂಚನೆ ನೀಡಿದ್ದಾರೆ.