ಮೈಸೂರು: ನಿಜವಾದ ಪ್ರಜಾಪ್ರಭುತ್ವ ಇದ್ದದ್ದು ಮಹಾರಾಜರ ಆಳ್ವಿಕೆಯಲ್ಲಿ, ಅದರಲ್ಲೂ ವಿಶೇಷವಾಗಿ ಮೈಸೂರು ಸಂಸ್ಥಾನ ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌರು ಬಣ್ಣಿಸಿದರು.
ಕರ್ನಾಟಕ ಸೇನಾ ಪಡೆ ವತಿಯಿಂದ ಮಹಾರಾಜ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಮೈಸೂರು ರಾಜ್ಯವನ್ನಾಳಿದ ಮಹಾಪ್ರಭು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 231ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಂಜೇಗೌಡರು ಮಾತನಾಡಿದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಕ್ಷರಶಃ ಪ್ರಜಾಪ್ರಭುತ್ವವೇ ಮೆರೆದಿತ್ತು. ಹಾಗಾಗಿ ಇಡೀ ರಾಜ್ಯಕ್ಕೆ ಬೆಳಕನ್ನು ನೀಡಿದ ನಮ್ಮ ರಾಜರುಗಳು ಅವಿಸ್ಮರಣೀಯರು ಎಂದು ಹೇಳಿದರು.

ಕಲೆ ಸಾಹಿತ್ಯ ಸಂಗೀತಕ್ಕೆ ಒತ್ತು ನೀಡಿದ್ದರು ಸ್ವತಹ ಕವಿಗಳಾಗಿದ್ದ ಮುಮ್ಮಡಿ ಅವರು, ಸುಮಾರು 54 ಕೃತಿಗಳನ್ನು ರಚಿಸಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹಿಂದುಳಿದವರಿಗೆ, ಮಹಿಳೆಯರಿಗೂ ಶಿಕ್ಷಣ ನೀಡಿದ್ದರು. ಆಧುನಿಕ ಮೈಸೂರಿನ ರೂವಾರಿಗಳು. ಹಾಗಾಗಿ ನಮ್ಮ ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜರು ಯಾವತ್ತೂ ಕೂಡ ಅವಿಸ್ಮರಣೆಯರು ಎಂದು ಮಂಜೇಗೌಡರು ತಿಳಿಸಿದರು.
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮೈಸೂರು ರಾಜ್ಯಕ್ಕೆ ಅಪಾರ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮೈಸೂರು ನಾಡನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ನುಡಿದರು.
ಮೈಸೂರಿನ ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು ಸೇರಿದಂತೆ ಹಲವಾರು ಸಂಸ್ಥೆಗಳನ್ನು ಸ್ಥಾಪನೆ ಮಾಡಿದ ಇಂತಹ ಮಹನೀಯರ ಜಯಂತಿಯನ್ನು ಸರ್ಕಾರ – ಜಿಲ್ಲಾಡಳಿತದ ವತಿಯಿಂದ ಪ್ರತಿ ವರ್ಷ ಆಚರಣೆ ಮಾಡಬೇಕು ಹಾಗೂ ಇವರ ಜೀವನ ಚರಿತ್ರೆ, ಕೊಡುಗೆ ಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ತೇಜೇಶ್ ಲೋಕೇಶ್ ಗೌಡ ಆಗ್ರಸಿದರು.
ಹಿರಿಯ ಸಂಸ್ಕೃತಿ ಪೋಷಕರಾದ ಡಾ . ರಘುರಾಂ ಕೆ ವಾಜಪೇಯಿ ಅವರು ಜನತೆಗೆ ಸಿಹಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ಡಾ. ಬಿ ಆರ್ ನಟರಾಜ್ ಜೋಯ್ಸ್, ಕೆ ಪಿ ಸಿ ಸಿ ಸದಸ್ಯ ನಜರ್ ಬಾದ್ ನಟರಾಜ್, ಮಹಾರಾಜ ಕಾಲೇಜು ಪ್ರಾಂಶುಪಾಲ ಉದಯಶಂಕರ್, ಗೋಲ್ಡನ್ ಸುರೇಶ್, ಗಿರೀಶ್ ಕುಮಾರ್, ಪ್ರಭುಶಂಕರ್, ಸಿಂದುವಳ್ಳಿ ಶಿವಕುಮಾರ್, ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ಭಾಗ್ಯಮ್ಮ, ಹನುಮಂತಯ್ಯ, ಮಾದರಾಜೇ ಅರಸ್, ಕೃಷ್ಣಪ್ಪ,ತಾಯೂರು ಗಣೇಶ್, ರಾಧಾಕೃಷ್ಣ, ಡಾ . ಶಾಂತರಾಜೇ ಅರಸ್, ರಘು ಅರಸ್, ಗಣೇಶ್ ಪ್ರಸಾದ್, ಚಂದ್ರು, ರಾಧಾಕೃಷ್ಣ, ಸಂಜಯ್, ರವಿ ನಾಯಕ್, ನಾಗರಾಜು, ರವೀಶ್, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.